ಮುಹಮ್ಮದ್ ಶಮಿ ಭಾರತ ತಂಡದ ಪರ ಆಡಲು ಏಕೆ ಸಾಧ್ಯವಿಲ್ಲ?: ಅಜಿತ್ ಅಗರ್ಕರ್ ರನ್ನು ಪ್ರಶ್ನಿಸಿದ ಸೌರವ್ ಗಂಗುಲಿ

ಮುಹಮ್ಮದ್ ಶಮಿ / ಸೌರವ್ ಗಂಗುಲಿ (File Photo: PTI)
ಮುಂಬೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಹಮ್ಮದ್ ಶಮಿ ಮಿಂಚಿನ ವೇಗದಲ್ಲಿ ವಿಕೆಟ್ ಗಳನ್ನು ಕಬಳಿಸುತ್ತಿದ್ದರೂ, ರಾಷ್ಟ್ರೀಯ ತಂಡದ ಬಾಗಿಲು ಅವರ ಮುಂದೆ ಇನ್ನೂ ತೆರೆದಿಲ್ಲ. ಮೂರು ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಕಬಳಿಸಿ ಅದ್ಭುತ ಫಾರ್ಮ್ ತೋರಿಸಿರುವ ಶಮಿಯನ್ನು ನಿರ್ಲಕ್ಷಿಸಿರುವುದಕ್ಕೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗುಲಿ ರಾಷ್ಟ್ರೀಯ ತಂಡದ ಆಯ್ಕೆದಾರರನ್ನು ಕಟುವಾಗಿ ಪ್ರಶ್ನಿಸಿದ್ದಾರೆ.
ಪುದುಚೇರಿ ವಿರುದ್ಧ 3/34, ಹರಿಯಾಣ ವಿರುದ್ಧ 4/34 ಹಾಗೂ ಸರ್ವಿಸಸ್ ವಿರುದ್ಧ 4/13 ಹೀಗೆ ಎಲ್ಲ ಪಂದ್ಯಗಳಲ್ಲಿ ಶಮಿ ತನ್ನ ಹಳೆಯ ಮಿಂಚಿನ ಬೌಲಿಂಗ್ ಟ್ರ್ಯಾಕ್ ಗೆ ಮರಳಿದ್ದಾರೆ. ರಣಜಿ ಮತ್ತು ವಿಜಯ್ ಹಜಾರೆ ಟ್ರೋಫಿಗಳಲ್ಲೂ ಅವರು ನಿರಂತರವಾಗಿ ವಿಕೆಟ್ ಕಲೆಹಾಕುತ್ತಿರುವುದು, ಆಯ್ಕೆದಾರರ ನಿರ್ಧಾರಗಳತ್ತ ಎಲ್ಲರ ಗಮನ ಸೆಳೆದಿದೆ.
“ಫಿಟ್ನೆಸ್ ಹಾಗೂ ಕೌಶಲ್ಯ ಎರಡರಲ್ಲಿಯೂ ಶಮಿ ಈಗಲೂ ಪ್ರಬಲರು. ಟೆಸ್ಟ್, ಏಕದಿನ, ಟಿ20 ಯಾವ ಸ್ವರೂಪಕ್ಕೂ ಅವರು ಅರ್ಹರು. ಇಂತಹ ಬೌಲರ್ ನನ್ನು ತಂಡದ ಹೊರಗಿಡಲು ಕಾರಣವೇನು? ಮುಹಮ್ಮದ್ ಶಮಿ ಭಾರತ ತಂಡಕ್ಕೆ ಏಕೆ ಆಡಲು ಸಾಧ್ಯವಿಲ್ಲ?",ಎಂದು ಗಂಗುಲಿ ಪ್ರಶ್ನೆ ಮಾಡಿದ್ದಾರೆ.
ಶಮಿ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನಡುವೆ ಸಂವಹನದ ಕೊರತೆ ಇದೆ ಎಂಬ ಶಮಿ ಅವರ ಆರೋಪವೂ ಈ ಹಿಂದೆ ಕೇಳಿ ಬಂದಿತ್ತು. ಅದನ್ನು ಮತ್ತೆ ಉಲ್ಲೇಖಿಸಿದ ಗಂಗುಲಿ, ಆಯ್ಕೆದಾರರು ಮತ್ತು ಆಟಗಾರರ ನಡುವೆ ಸಂವಹನ ಸುಧಾರಿಸಬೇಕಿದೆ ಎಂದು ಸೂಚಿಸಿದರು.
2023ರ ವಿಶ್ವಕಪ್ ನಂತರ ಪಾದ ಶಸ್ತ್ರಚಿಕಿತ್ಸೆಗೊಳಗಾದ ಶಮಿ, ನಂತರ ಮರುಕಳಿಸಿದ ಗಾಯಗಳಿಂದಾಗಿ ತಂಡದಿಂದ ಹೊರಗುಳಿದರು. ಆಸ್ಟ್ರೇಲಿಯಾದ ಬಾರ್ಡರ್–ಗವಾಸ್ಕರ್ ಟ್ರೋಫಿಗಾಗಿ ಅವರು ಪರಿಗಣನೆಯಲ್ಲಿದ್ದರೂ ಆಯ್ಕೆ ಆಗಲಿಲ್ಲ. ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಐದು ಪಂದ್ಯಗಳಲ್ಲಿ ಒಂಭತ್ತು ವಿಕೆಟ್ಗಳನ್ನು ಪಡೆದು ಮರುಪ್ರವೇಶಿಸಿದ ಅವರು, ಕಳೆದ ಏಳು ತಿಂಗಳಿನಿಂದ ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ .
35ರ ಹರೆಯದಲ್ಲೂ ವೇಗ, ನಿಯಂತ್ರಣ ಮತ್ತು ಅನುಭವವನ್ನು ಸಮನ್ವಯಗೊಳಿಸಿ ಪಂದ್ಯದ ಗತಿ ಬದಲಾಯಿಸುವ ಸಾಮರ್ಥ್ಯ ಶಮಿಯಲ್ಲಿದೆ. ಜಸ್ಪ್ರೀತ್ ಬುಮ್ರಾ ಅವರನ್ನು ಸೀಮಿತವಾಗಿ ಬಳಸಬೇಕಾದ ಪರಿಸ್ಥಿತಿಯಲ್ಲೂ, ಮುಹಮ್ಮದ್ ಸಿರಾಜ್ ಗೂ ಅನುಭವೀ ಸಂಗಾತಿಯ ಅವಶ್ಯಕತೆ ಇರುವ ಸಂದರ್ಭದಲ್ಲೂ, ಶಮಿಗೆ ಮತ್ತೆ ಅವಕಾಶ ನೀಡಬೇಕೆಂದು ಕ್ರಿಕೆಟ್ ವಲಯದಲ್ಲಿ ಅಭಿಪ್ರಾಯ ಕೇಳಿ ಬರುತ್ತಿದೆ.







