ಝಿಂಬಾಬ್ವೆ ವಿರುದ್ಧ ಟೆಸ್ಟ್ ಸರಣಿ: ದಕ್ಷಿಣ ಆಫ್ರಿಕಾ ತಂಡ ಪ್ರಕಟ

PC : NDTV
ಕೇಪ್ಟೌನ್: ಝಿಂಬಾಬ್ವೆ ಕ್ರಿಕೆಟ್ ತಂಡದ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ 16 ಸದಸ್ಯರನ್ನು ಒಳಗೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಐವರು ಹೊಸ ಆಟಗಾರರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಬ್ಯಾಟರ್ಗಳಾದ ಪ್ರಿಟೋರಿಯಸ್ ಹಾಗೂ ಲೆಸೆಗೊ ಸೆನೋಕ್ವಾನೆ, ವೇಗದ ಬೌಲರ್ ಕೋಡಿ ಯೂಸುಫ್, ಡೆವಾಲ್ಡ್ ಬ್ರೆವಿಸ್ ಹಾಗೂ ಆಫ್ ಸ್ಪಿನ್ನರ್ ಪ್ರೆನೆಲನ್ ಸುಬ್ರಾಯೆನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಲಾರ್ಡ್ಸ್ನಲ್ಲಿ ಬುಧವಾರದಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯದ ಸವಾಲನ್ನು ಎದುರಿಸಲಿದೆ. ಜೂನ್ 28ರಿಂದ ಜುಲೈ 2ರ ತನಕ ಕ್ವೀನ್ಸ್ ಕ್ಲಬ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಝಿಂಬಾಬ್ವೆ ತಂಡವನ್ನು ಎದುರಿಸಲಿದೆ. ಆ ನಂತರ ಇದೇ ಮೈದಾನದಲ್ಲಿ ಜುಲೈ 6ರಿಂದ 10ರ ತನಕ 2ನೇ ಟೆಸ್ಟ್ ಪಂದ್ಯವನ್ನಾಡಲಿದೆ.
ಝಿಂಬಾಬ್ವೆ ಪ್ರವಾಸದಿಂದ ಮಾರ್ಕೊ ಜಾನ್ಸನ್, ಮರ್ಕ್ರಮ್, ಕಾಗಿಸೊ ರಬಾಡ, ರಯಾನ್ ರಿಕೆಲ್ಟನ್ ಹಾಗೂ ಟ್ರಿಸ್ಟನ್ ಸ್ಟಬ್ಸ್ಗೆ ವಿಶ್ರಾಂತಿ ನೀಡಲಾಗಿದೆ. ಫಿಟ್ನೆಸ್ ಕಾರಣಕ್ಕೆ ವೇಗದ ಬೌಲರ್ಗಳಾದ ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಝಿ ಹಾಗೂ ಲಿಝಾರ್ಡ್ ವಿಲಿಯಮ್ಸ್ರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
►ಝಿಂಬಾಬ್ವೆ ಸರಣಿಗಾಗಿ ದಕ್ಷಿಣ ಆಫ್ರಿಕ ಟೆಸ್ಟ್ ತಂಡ:
ಟೆಂಬಾ ಬವುಮಾ(ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್,ಮ್ಯಾಥ್ಯೂ ಬ್ರೀಟ್ಜ್ಕೆ, ಡೆವಾಲ್ಡ್ ಬ್ರೆವಿಸ್, ಕಾರ್ಬಿನ್ ಬಾಷ್, ಟೋನಿ ಡಿ ರೆರ್ಝಿ, ಝುಬೇರ್ ಹಂಝಾ, ಕೇಶವ ಮಹಾರಾಜ್, ಕ್ವೆನಾ ಮಫಕಾ, ವಿಯಾನ್ ಮುಲ್ದರ್, ಲುಂಗಿ ಗಿಡಿ, ಲುವಾನ್-ಡ್ರೆ ಪ್ರಿಟೋರಿಯಸ್, ಲೆಸೆಗೊ ಸೆನೋಕ್ವಾನೆ, ಪ್ರೆನೆಲಿನ್ ಸುಬ್ರಾಯೆನ್, ಕೈಲ್ ವೆರ್ರೆನ್ನೆ, ಕೋಡಿ ಯೂಸುಫ್.







