2ನೇ ಟೆಸ್ಟ್ | ಪಾಕಿಸ್ತಾನಕ್ಕೆ 5 ಜೀವದಾನ ನೀಡಿದ ದಕ್ಷಿಣ ಆಫ್ರಿಕ!

Photo Credit : NDTV
ರಾವಲ್ಪಿಂಡಿ, ಅ. 20: ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯದ ಮೊದಲ ದಿನವಾದ ಸೋಮವಾರ ದಕ್ಷಿಣ ಆಫ್ರಿಕದ ಫೀಲ್ಡರ್ಗಳು ಐದು ಕ್ಯಾಚ್ಗಳನ್ನು ಕೈಚೆಲ್ಲಿ ಪಾಕಿಸ್ತಾನಿ ಆಟಗಾರರಿಗೆ ಜೀವದಾನಗಳನ್ನು ನೀಡಿದರು. ಅದರ ಸಂಪೂರ್ಣ ಪ್ರಯೋಜನವನ್ನು ಪಡೆದ ಪಾಕಿಸ್ತಾನವು ಮೊದಲನೇ ದಿನದ ಆಟದ ಮುಕ್ತಾಯಕ್ಕೆ ತನ್ನ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 259 ರನ್ಗಳನ್ನು ಕಲೆ ಹಾಕಿದೆ.
ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ದಕ್ಷಿಣ ಆಫ್ರಿಕ ಫೀಲ್ಡರ್ಗಳು ಐದು ಜೀವದಾನಗಳನ್ನು ನೀಡಿರುವುದು ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಪಾಕಿಸ್ತಾನಿ ನಾಯಕ ಶಾನ್ ಮಸೂದ್ 71ರಲ್ಲಿದ್ದಾಗ ಕೇಶವ ಮಹಾರಾಜರ ಎಸೆತದಲ್ಲಿ ಅವರ ಕ್ಯಾಚನ್ನು ಕೈಚೆಲ್ಲಲಾಯಿತು. ಅವರು ಬಳಿಕ 87 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರ್ದಾರರಾದರು.
ಇಂದಿನ ಅತ್ಯಂತ ಅದೃಷ್ಟಶಾಲಿ ಆಟಗಾರನೆಂದರೆ ಅಬ್ದುಲ್ಲಾ ಶಫೀಕ್. ಅವರ ಕ್ಯಾಚನ್ನು ನಾಲ್ಕು ಬಾರಿ ಕೈಬಿಡಲಾಯಿತು. ಅವರು ಅಂತಿಮವಾಗಿ 57 ರನ್ ಗಳಿಸಿದರು.
ದಿನದಾಟದ ಮುಕ್ತಾಯದ ವೇಳೆಗೆ ಸೌದ್ ಶಕೀಲ್ ಮತ್ತು ಸಲ್ಮಾನ್ ಅಘಾ ಕ್ರಮವಾಗಿ 42 ಮತ್ತು 10 ರನ್ಗಳನ್ನು ಗಳಿಸಿ ಕ್ರೀಸ್ನಲ್ಲಿದ್ದಾರೆ.
ದಕ್ಷಿಣ ಆಫ್ರಿಕದ ವೇಗಿ ಕಗಿಸೊ ರಬಡ ಎರಡನೇ ಹೊಸ ಚೆಂಡಿನಲ್ಲಿ ಐದನೇ ಎಸೆತದಲ್ಲಿ ಮುಹಮ್ಮದ್ ರಿಝ್ವಾನ್ (19)ರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿ ತಂಡಕ್ಕೆ ಕೊಂಚ ನೆಮ್ಮದಿ ಒದಗಿಸಿದರು. ಗಾಯದಿಂದಾಗಿ ಲಾಹೋರ್ನಲ್ಲಿ ನಡೆದ ಮೊದಲ ಟೆಸ್ಟ್ನಿಂದ ಹೊರಗಿದ್ದ ಕೇಶವ ಮಹಾರಾಜ್ 63 ರನ್ಗಳನ್ನು ನೀಡಿ 2 ವಿಕೆಟ್ಗಳನ್ನು ಉರುಳಿಸಿದರು ಮತ್ತು ಇನ್ನೋರ್ವ ಸ್ಪಿನ್ನರ್ ಸೈಮನ್ ಹಾರ್ಮರ್ 75 ರನ್ಗಳನ್ನು ಕೊಟ್ಟು 2 ವಿಕೆಟ್ಗಳನ್ನು ಪಡೆದರು.
ಮೊದಲ ದಿನದ ಪಂದ್ಯದ ಹೆಚ್ಚಿನ ಓವರ್ಗಳನ್ನು ಕೇಶವ ಮಹಾರಾಜ್ ಮತ್ತು ಹಾರ್ಮರ್ ಹಾಕಿದರು. ಮೊದಲ ಪಂದ್ಯದಲ್ಲಿ 11 ವಿಕೆಟ್ಗಳನ್ನು ಪಡೆದಿದ್ದ ಸ್ಪಿನ್ನರ್ ಸೆನುರನ್ ಮುತ್ತುಸಾಮಿ ಕೇವಲ ನಾಲ್ಕು ಓವರ್ಗಳನ್ನು ಹಾಕಿದರು.
ಫಾರ್ಮ್ನಲ್ಲಿಲ್ಲದ ಬಾಬರ್ ಅಝಮ್ ಕೇವಲ 16 ರನ್ಗಳ ದೇಣಿಗೆಯನ್ನು ನೀಡಿದರು. ಅವರ 29 ಟೆಸ್ಟ್ ಇನಿಂಗ್ಸ್ಗಳಲ್ಲಿ ಒಂದು ಶತಕವೂ ಬಂದಿಲ್ಲ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಮೊದಲ ಇನಿಂಗ್ಸ್ (91 ಒವರ್ಗಳಲ್ಲಿ) 259-5
ಅಬ್ದುಲ್ಲಾ ಶಫಿಟ್ 57, ಶಾನ್ ಮಸೂದ್ 87, ಸೌದ್ ಶಕೀಲ್ (ಔಟಾಗದೆ) 42
ಕೇಶವ ಮಹಾರಾಜ 2-63, ಸೈಮನ್ ಹಾರ್ಮರ್ 2-75







