ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್-8 ಪಂದ್ಯ : ಕೋಚ್ ಗಂಭೀರ್-ಹಾರ್ದಿಕ್ ಪಾಂಡ್ಯ ನಡುವೆ ಮಾತಿನ ಚಕಮಕಿ

ಕೋಚ್ ಗೌತಮ್ ಗಂಭೀರ್ , ಹಾರ್ದಿಕ್ ಪಾಂಡ್ಯ | Photo Credit : PTI
ಅಹ್ಮದಾಬಾದ್, ಫೆ.23: ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಭಾರತ ತಂಡ ಭಾರೀ ನಿರಾಸೆ ಅನುಭವಿಸಿದೆ. ಮಾತ್ರವಲ್ಲ ಸೆಮಿ ಫೈನಲ್ ತಲುಪುವ ಹಾದಿ ಕೂಡ ಕಠಿಣವಾಗಿ ಪರಿಣಮಿಸಿದೆ.
ಇದೇ ಪಂದ್ಯದ ನಡುವೆ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸೂಪರ್-8 ಪಂದ್ಯದ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಪ್ರಮುಖ ಮೂವರು ಆಟಗಾರರನ್ನು ಔಟ್ ಮಾಡಿದ್ದ ಭಾರತೀಯ ಬೌಲರ್ಗಳು ಮೇಲುಗೈ ಸಾಧಿಸಿದ್ದರು. ಆದರೆ ನಂತರ ಡೇವಿಡ್ ಮಿಲ್ಲರ್ ಹಾಗೂ ಡೆವಾಲ್ಡ್ ಬ್ರೆವಿಸ್ ನಿರ್ಣಾಯಕ ಜೊತೆಯಾಟ ನಡೆಸಿದರು. ಈ ಹಂತದಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ವಿರುದ್ಧ ಕೋಚ್ ಗಂಭೀರ್ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ವೇಳೆ ಪಾಂಡ್ಯ ಕೂಡ ಗಂಭೀರ್ ಜೊತೆ ಮಾತುಕತೆ ನಡೆಸಿದ್ದಾರೆ.
ಈ ಇಬ್ಬರ ನಡುವೆ ಏನು ಮಾತುಕತೆ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದಿಲ್ಲವಾದರೂ, ಗಂಭೀರ್ ಕೋಪಗೊಂಡು ಮಾತನಾಡಿರುವುದು ಮುಖಭಾವದಲ್ಲಿ ಸ್ಪಷ್ಟವಾಗಿತ್ತು.
ದಕ್ಷಿಣ ಆಫ್ರಿಕಾದ ಬ್ಯಾಟರ್ ಮಿಲ್ಲರ್, ವರುಣ್ ಚಕ್ರವರ್ತಿಯವರ 12ನೇ ಓವರ್ನಲ್ಲಿ ಭರ್ಜರಿ ಬೌಂಡರಿ ಬಾರಿಸುತ್ತಾರೆ. ಈ ವೇಳೆ ದ.ಆಫ್ರಿಕಾ ತಂಡದ ಮೊತ್ತ 100ರ ಗಡಿ ದಾಟುತ್ತದೆ. ಆ ಸಂದರ್ಭದಲ್ಲಿ ಬೌಂಡರಿ ಗೆರೆ ಬಳಿ ನಿಂತಿದ್ದ ಪಾಂಡ್ಯ ಜೊತೆ ಮಾತಿಗೆ ಇಳಿದ ಗಂಭೀರ್, ನಮ್ಮ ಯೋಜನೆಯ ಪ್ರಕಾರ ಯಾವುದೂ ನಡೆಯುತ್ತಿಲ್ಲ ಎಂಬಂತೆ ಪಾಂಡ್ಯ ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಪಾಂಡ್ಯ ಕೂಡ ಪ್ರತ್ಯುತ್ತರ ನೀಡುತ್ತಾರೆ. ಈ ಇಬ್ಬರ ನಡುವಿನ ಮಾತಿನ ಚಕಮಕಿಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯದುದ್ದಕ್ಕೂ ತಾಳ್ಮೆ ಕಳೆದುಕೊಂಡಿದ್ದ ಗಂಭೀರ್ ಅವರು ಪದೇ ಪದೇ ಸಿಟ್ಟಾಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.






