ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ: ಋತುರಾಜ್ ಗಾಯಕ್ವಾಡ್ ಬದಲಿಗೆ ಅಭಿಮನ್ಯು ಈಶ್ವರನ್

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಋತುರಾಜ್ ಗಾಯಕ್ವಾಡ್ ಹೊರಗುಳಿದಿದ್ದು, ಅಭಿಮನ್ಯು ಈಶ್ವರನ್ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಪೋರ್ಟ್ ಎಲಿಝಬೆತ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಋತುರಾಜ್ ಬಲ ಉಂಗುರ ಬೆರಳಿಗೆ ಗಾಯವಾಗಿತ್ತು. ತಜ್ಞರನ್ನು ಸಂಪರ್ಕಿಸಿದ ನಂತರ ಸ್ಕ್ಯಾನಿಂಗ್ಗೆ ಒಳಗಾದರು. ಬಿಸಿಸಿಐ ವೈದ್ಯಕೀಯ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದ ಉಳಿದ ಸರಣಿಯಿಂದ ಋತುರಾಜ್ರನ್ನು ಹೊರಗಿಟ್ಟಿದೆ.
ತನ್ನ ಗಾಯವನ್ನು ನಿಭಾಯಿಸಲು ಆರಂಭಿಕ ಬ್ಯಾಟರ್ ಋತುರಾಜ್ ಎನ್ಸಿಎಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮತ್ತೊಂದು ಬೆಳವಣಿಗೆಯಲ್ಲಿ ವೇಗದ ಬೌಲರ್ ಹರ್ಷಿತ್ ರಾಣಾ ಗಾಯದ ಸಮಸ್ಯೆಯ ಕಾರಣಕ್ಕೆ ದಕ್ಷಿಣ ಆಫ್ರಿಕಾ ಎ ವಿರುದ್ಧ ಬೆನೋನಿಯಲ್ಲಿ ಡಿಸೆಂಬರ್ 26ರಿಂದ ಆರಂಭವಾಗಲಿರುವ ನಾಲ್ಕು ದಿನಗಳ ಪಂದ್ಯದಿಂದ ಹೊರಗುಳಿದಿದ್ದಾರೆ.
ಆಯ್ಕೆ ಸಮಿತಿಯು ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಅವೇಶ್ ಖಾನ್ ಹಾಗೂ ರಿಂಕು ಸಿಂಗ್ರನ್ನು ಭಾರತ ಎ ತಂಡಕ್ಕೆ ಸೇರಿಸಿಕೊಂಡಿದೆ. ಕುಲದೀಪ್ ಯಾದವ್ರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.
ದಕ್ಷಿಣ ಆಫ್ರಿಕಾ ಎ ವಿರುದ್ಧ ಚತುರ್ದಿನ ಪಂದ್ಯಕ್ಕೆ ಭಾರತ ಎ ತಂಡ:
ಅಭಿಮನ್ಯು ಈಶ್ವರನ್(ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ತಿಲಕ್ ವರ್ಮಾ, ಧ್ರುವ್ ಜುರೆಲ್(ವಿಕೆಟ್ಕೀಪರ್), ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ಅವೇಶ್ ಖಾನ್, ನವದೀಪ್ ಸೈನಿ, ಆಕಾಶ್ ದೀಪ್, ವಿದ್ವತ್ ಕಾವೇರಪ್ಪ, ಮಾನವ್ ಸುಥಾರ್, ರಿಂಕು ಸಿಂಗ್.







