ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ದಕ್ಷಿಣ ಆಫ್ರಿಕಾ; ಭಾರತದ ವಿರುದ್ಧ 2-0 ಅಂತರದಿಂದ ಕ್ಲೀನ್ ಸ್ವೀಪ್

Photo credit: PTI
ಗುವಾಹಟಿ: ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡದ ನಡುವಿನ ದ್ವಿತೀಯ ಮತ್ತು ಅಂತಿಮ ಟೆಸ್ಟ್ ನಲ್ಲಿ ಭಾರತ ತಂಡ 408 ರನ್ ಗಳ ಬೃಹತ್ ಮೊತ್ತದ ಅಂತರದಲ್ಲಿ ಪರಾಭಗೊಂಡಿದ್ದು, 25 ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ ತಂಡ 2-0 ಅಂತರದ ಟೆಸ್ಟ್ ಸರಣಿ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಪಂದ್ಯದ ನಾಲ್ಕನೆಯ ದಿನದಾಟದಂತ್ಯವಾದ ನಿನ್ನೆ (ಮಂಗಳವಾರ) ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದ್ದ ಭಾರತ, ಪಂದ್ಯದ ಕೊನೆಯ ದಿನವಾದ ಇಂದೂ ಕೂಡಾ ದಕ್ಷಿಣ ಆಫ್ರಿಕಾ ತಂಡದ ಸಂಘಟಿತ ಬೌಲಿಂಗ್ ದಾಳಿಯೆದುರು ಪರದಾಡಿತು. ಭಾರತದ ಬ್ಯಾಟರ್ ಗಳನ್ನು ಎರಡನೆಯ ಟೆಸ್ಟ್ ಪಂದ್ಯದಲ್ಲೂ ಕಾಡಿದ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಸೈಮನ್ ಹಾರ್ಮರ್, ಕೇವಲ 37 ರನ್ ನೀಡಿ ಪ್ರಮುಖ ಆರು ವಿಕೆಟ್ ಗಳನ್ನು ಕಬಳಿಸಿದರು. ಪ್ರಥಮ ಇನಿಂಗ್ಸ್ ನಲ್ಲೂ ಪ್ರಮುಖ ಮೂರು ವಿಕೆಟ್ ಗಳನ್ನು ಕಿತ್ತಿದ್ದ ಸೈಮನ್ ಹಾರ್ಮರ್, ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದು ಮಿಂಚಿದರು.
ಭಾರತ ತಂಡದ ಪರ ರವೀಂದ್ರ ಜಡೇಜಾ (54) ಹೊರತುಪಡಿಸಿ, ಬೇರ್ಯಾವುದೇ ಬ್ಯಾಟರ್ ದಕ್ಷಿಣ ಆಫ್ರಿಕಾ ಬೌಲರ್ ಗಳಿಗೆ ಹೆಚ್ಚು ಪ್ರತಿರೋಧ ತೋರಲಿಲ್ಲ. ಭಾರತ ತಂಡವು ಈ ಸರಣಿ ಸೋಲಿನ ಮೂಲಕ, ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ಪಾಕಿಸ್ತಾನಕ್ಕಿಂತ ಕೆಳಕ್ಕೆ ಕುಸಿದಿದ್ದು, ಐದನೆಯ ಶ್ರೇಯಾಂಕ ತಲುಪಿದೆ.
2000ರಲ್ಲಿ ಹ್ಯಾನ್ಸಿ ಕ್ರೋನಿಯೆ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡದೆದುರು ಅದರ ತವರಿನಲ್ಲೇ ಸರಣಿ ಗೆಲುವು ಸಾಧಿಸಿದ ಬಳಿಕ, 25 ವರ್ಷಗಳವರೆಗೆ ಈ ಸಾಧನೆ ಮಾಡಲು ಸಾಧ್ಯ ವಾಗಿರಲಿಲ್ಲ. ನಾಯಕ ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಈ ಸುದೀರ್ಘ ಕಾಲದ ಕೊರತೆಯನ್ನು ಅಂತ್ಯಗೊಳಿಸಿದ್ದು, ಕ್ಲೀನ್ ಸ್ವೀಪ್ ಸಾಧನೆ ಮಾಡುವ ಮೂಲಕ, ಹ್ಯಾನ್ಸಿ ಕ್ರೋನಿಯೆ ನಾಯಕತ್ವದ ತಂಡದ ಸರಣಿ ಗೆಲುವಿನ ಸಾಧನೆಯನ್ನು ಮತ್ತಷ್ಟು ಉತ್ತಮಗೊಳಿಸಿದೆ.
ದಕ್ಷಿಣ ಆಫ್ರಿಕಾ ತಂಡಡೆದುರಿನ ಈ ಹೀನಾಯ ಸೋಲಿನ ಬೆನ್ನಿಗೇ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಲ್ಲದೆ, ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ಟೆಸ್ಟ್ ತಂಡಕ್ಕೆ ವಿದಾಯ ಘೋಷಿಸಿದ್ದ ವಿರಾಟ್ ಕೊಹ್ಲಿ ಮತ್ತೆ ಭಾರತ ಟೆಸ್ಟ್ ತಂಡಕ್ಕೆ ಮರಳಬೇಕು ಎಂಬ ಕೂಗು ಬಲಗೊಂಡಿದೆ.







