ವಿಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಸುಲಭ ಗೆಲುವು

Photo Credit : PTI
ಅಹ್ಮದಾಬಾದ್, ಫೆ. 26: ಆಲ್ರೌಂಡ್ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಐಸಿಸಿ ಟಿ-20 ವಿಶ್ವಕಪ್ ಗ್ರೂಪ್-1ರ ಸೂಪರ್-8 ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿದೆ. ಸತತ ಎರಡನೇ ಗೆಲುವು ದಾಖಲಿಸಿರುವ ಹರಿಣ ಪಡೆ ನಾಲ್ಕು ಅಂಕಗಳೊಂದಿಗೆ 2.890 ನೆಟ್ ರನ್ ರೇಟ್ ಹೊಂದಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುರುವಾರ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ಇಂಡೀಸ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ವೆಸ್ಟ್ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.
ಗೆಲ್ಲಲು 177 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ ನಾಯಕ ಏಡೆನ್ ಮರ್ಕ್ರಮ್ (ಔಟಾಗದೆ 82, 46 ಎಸೆತ, 7 ಬೌಂಡರಿ, 4 ಸಿಕ್ಸರ್), ಕ್ವಿಂಟನ್ ಡಿಕಾಕ್ (47, 24 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ರಯಾನ್ ರಿಕೆಲ್ಟನ್ (ಔಟಾಗದೆ 45, 28 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಸಾಹಸದಿಂದ 16.1 ಓವರ್ ಗಳಲ್ಲಿ ಗೆಲುವು ಸಾಧಿಸಿತು.
ಇದಕ್ಕೂ ಮೊದಲು ಲುಂಗಿ ಗಿಡಿ (3-30) ಹಾಗೂ ಕಾಗಿಸೊ ರಬಾಡ (2-22) ಅವರ ಕರಾರುವಾಕ್ ದಾಳಿಗೆ ಕಂಗಾಲಾದ ವೆಸ್ಟ್ಇಂಡೀಸ್ 10.2 ಓವರ್ ಗಳಲ್ಲಿ 83 ರನ್ಗೆ ಏಳು ವಿಕೆಟ್ ಕಳೆದುಕೊಂಡಿತ್ತು.
ರೊಮಾರಿಯೊ ಶೆಫರ್ಡ್ (ಔಟಾಗದೆ 52, 37 ಎಸೆತ) ಹಾಗೂ ಜೇಸನ್ ಹೋಲ್ಡರ್ (49, 31 ಎಸೆತ) ಎಂಟನೇ ವಿಕೆಟ್ ಗೆ 57 ಎಸೆತಗಳಲ್ಲಿ 89 ರನ್ ಜೊತೆಯಾಟ ನಡೆಸಿ ಗೌರವಾರ್ಹ ಮೊತ್ತ ಸೇರಿಸಿದರು.






