ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್: ಮತ್ತೆ ಭಾರತೀಯ ಬ್ಯಾಟರ್ ಗಳ ವೈಫಲ್ಯ; 201 ರನ್ ಗಳಿಗೆ ಆಲೌಟ್

Photo credit: PTI
ಗುವಾಹಟಿ: ಇಲ್ಲಿನ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನ ಮೂರನೆಯ ದಿನವಾದ ಇಂದು ಭಾರತೀಯ ಬ್ಯಾಟರ್ ಗಳು ಮತ್ತೊಮ್ಮೆ ದಯನೀಯ ವೈಫಲ್ಯ ಅನುಭವಿಸಿದರು. ಇದರ ಪರಿಣಾಮ ಭಾರತ ತಂಡ ಕೇವಲ 201 ರನ್ ಗಳಿಗೆ ಆಲೌಟ್ ಆಯಿತು.
ರವಿವಾರ ಮೊದಲ ಇನಿಂಗ್ಸ್ ನಲ್ಲಿ 489 ರನ್ ಗಳ ಬೃಹತ್ ಮೊತ್ತ ಪೇರಿಸಿದ್ದ ದಕ್ಷಿಣ ಆಫ್ರಿಕಾ ತಂಡ, ಇಂದು ಬೌಲಿಂಗ್ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿತು. ಪ್ರಥಮ ಟೆಸ್ಟ್ ನಂತೆ ಈ ಟೆಸ್ಟ್ ನಲ್ಲೂ ಭಾರತೀಯ ಬ್ಯಾಟರ್ ಗಳನ್ನು ಕಾಡಿದ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಸೈಮನ್ ಹಾರ್ಮರ್, 64 ರನ್ ನೀಡಿ, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್ ಹಾಗೂ ವಾಷಿಂಗ್ಟನ್ ಸುಂದರ್ ಸೇರಿದಂತೆ ಮೂರು ವಿಕೆಟ್ ಗಳನ್ನು ಕಿತ್ತರು.
ಈ ಪೈಕಿ ಯಶಸ್ವಿ ಜೈಸ್ವಾಲ್ (58) ಹಾಗೂ ವಾಷಿಂಗ್ಟನ್ ಸುಂದರ್ (48) ಮಾತ್ರ ಭಾರತ ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಉಳಿದೆಲ್ಲ ಪ್ರಮುಖ ಬ್ಯಾಟರ್ ಗಳು ಯಾವುದೇ ಪ್ರತಿರೋಧ ತೋರದೆ ದಕ್ಷಿಣ ಆಫ್ರಿಕಾ ತಂಡದ ಬೌಲರ್ ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ಆದರೆ, ಭಾರತ ತಂಡದ ಮೇಲೆ ಫಾಲೋ ಆನ್ ಹೇರದಿರಲು ನಿರ್ಧರಿಸಿದ ದಕ್ಷಿಣ ಆಫ್ರಿಕಾ ತಂಡ, ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ ದಿನದಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದ್ದು, ಒಟ್ಟಾರೆ 314 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ.







