2ನೇ ಟೆಸ್ಟ್: ಝಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಇನಿಂಗ್ಸ್ ಜಯ, ಸರಣಿ ಕೈವಶ

PC : ICC
ಬುಲಾವಯೊ: ದ್ವಿತೀಯ ಟೆಸ್ಟ್ ಪಂದ್ಯದ 3ನೇ ದಿನವಾದ ಮಂಗಳವಾರ ಆತಿಥೇಯ ಝಿಂಬಾಬ್ವೆ ತಂಡವನ್ನು ಇನಿಂಗ್ಸ್ ಹಾಗೂ 236 ರನ್ ಗಳ ಅಂತರದಿಂದ ಮಣಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 2 ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 5 ವಿಕೆಟ್ ಗಳ ನಷ್ಟಕ್ಕೆ 626 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ. ಆತಿಥೇಯ ತಂಡವು ತನ್ನ ಮೊದಲ ಇನಿಂಗ್ಸ್ ನಲ್ಲಿ 170 ರನ್ ಗೆ ಆಲೌಟಾಗಿ ಫಾಲೋ-ಆನ್ ಗೆ ಸಿಲುಕಿತು. ಝಿಂಬಾಬ್ವೆ ತನ್ನ 2ನೇ ಇನಿಂಗ್ಸ್ ನಲ್ಲಿ 220 ರನ್ ಗಳಿಸಿ ಆಲೌಟಾಗಿದೆ. ಇನಿಂಗ್ಸ್ ಅಂತರದಿಂದ ಸೋಲುಂಡಿದೆ.
ಝಿಂಬಾಬ್ವೆ ತಂಡವು 3ನೇ ದಿನವಾದ ಮಂಗಳವಾರ 1 ವಿಕೆಟ್ ನಷ್ಟಕ್ಕೆ 51 ರನ್ ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿತು. ಬೆಳಗ್ಗಿನ ಅವಧಿಯಲ್ಲಿ 92 ರನ್ ಸೇರಿಸಿದ್ದರೂ, ನಿರಂತರವಾಗಿ ವಿಕೆಟ್ ಗಳನ್ನು ಕಳೆದುಕೊಂಡ ಪರಿಣಾಮ ಟೀ ವಿರಾಮಕ್ಕೆ ಮೊದಲೇ ಗಂಟುಮೂಟೆ ಕಟ್ಟಿತು.
ನಾಲ್ಕು ವಿಕೆಟ್ ಗಳನ್ನು ಕಬಳಿಸಿದ ವೇಗದ ಬೌಲರ್ ಕಾರ್ಬಿನ್ ಬಾಶ್(4-38) ಝಿಂಬಾಬ್ವೆ ತಂಡದ ಬಾಲ ಕತ್ತರಿಸಿದರು. ಸ್ಪಿನ್ನರ್ ಎಸ್.ಮುತ್ತುಸ್ವಾಮಿ(3-77) ಹಾಗೂ ಕೋಡಿ ಯೂಸುಫ್(2-38) ಐದು ವಿಕೆಟ್ ಗಳನ್ನು ಹಂಚಿಕೊಂಡರು.ಮುಲ್ದರ್(1-24) ಒಂದು ವಿಕೆಟ್ ಪಡೆದರು.
ಕೈಟಾನೊ(40 ರನ್), ನಿಕ್ ವೆಲ್ಚ್(55 ರನ್) ಹಾಗೂ ನಾಯಕ ಕ್ರೆಗ್ ಎರ್ವಿನ್(49 ರನ್)ಒಂದಷ್ಟು ಪ್ರತಿರೋಧ ಒಡ್ಡಿದರು.
ದಕ್ಷಿಣ ಆಫ್ರಿಕಾದ ಹಂಗಾಮಿ ನಾಯಕ ವಿಯಾನ್ ಮುಲ್ದರ್ ಔಟಾಗದೆ 367 ರನ್(334 ಎಸೆತ, 49 ಬೌಂಡರಿ, 4 ಸಿಕ್ಸರ್) ಗಳಿಸಿ, ಬ್ರಿಯಾನ್ ಲಾರಾ ಅವರ 21 ವರ್ಷಗಳ ಹಳೆಯ 400 ರನ್ ದಾಖಲೆಯನ್ನು ಮುರಿಯಲು ಕೇವಲ 34 ರನ್ ಅಗತ್ಯವಿದ್ದಾಗ 2ನೇ ದಿನದಾಟದ ಲಂಚ್ ವಿರಾಮದ ವೇಳೆಗೆ ಇನಿಂಗ್ಸ್ ಡಿಕ್ಲೇರ್ ಮಾಡಿದರು. ವಿಂಡೀಸ್ ದಂತಕತೆ ಲಾರಾ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಈ ಮಹತ್ವದ ಸಾಧನೆ ಮಾಡಿದ್ದರು.
27ರ ಹರೆಯದ ಆಲ್ರೌಂಡರ್ ಮುಲ್ದರ್ ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿಯು ಈ ಪಂದ್ಯಕ್ಕಿಂತ ಮೊದಲು 26.2ರಷ್ಟಿತ್ತು.
‘‘ಕ್ರಿಕೆಟ್ ಪಂದ್ಯಕ್ಕೆ ಗೌರವ ನೀಡುವುದು ಅತ್ಯಂತ ಮುಖ್ಯಿ. ಲಾರಾ ಅವರು ಕ್ರಿಕೆಟ್ ಪಂದ್ಯ ಆಡಿರುವ ಓರ್ವ ಶ್ರೇಷ್ಠ ಆಟಗಾರ. ಆ ದಾಖಲೆ ಪತನವಾಗದೆ ಉಳಿಯಲು ಅರ್ಹವಾಗಿದೆ’’ ಎಂದು ಸೋಮವಾರ ಪಂದ್ಯದ ನಂತರ ಮುಲ್ದರ್ ಹೇಳಿದ್ದಾರೆ.
ಮುಲ್ದರ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 5ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. ದಕ್ಷಿಣ ಆಫ್ರಿಕಾದ ಪರ ದಾಖಲೆ ನಿರ್ಮಿಸಿದರು. ಮುಲ್ದರ್ ಅವರು ಪಂದ್ಯದಲ್ಲಿ 3 ವಿಕೆಟ್ ಗಳನ್ನು ಪಡೆದಿರುವುದಲ್ಲದೆ, ಮೂರು ಕ್ಯಾಚ್ಗಳನ್ನು ಪಡೆದರು. ಸರಣಿಯಲ್ಲಿ ಒಟ್ಟು 531 ರನ್ ಹಾಗೂ 7 ವಿಕೆಟ್ ಗಳನ್ನು ಪಡೆದಿದ್ದು ಈ ಸಾಧನೆಗೆ ಅರ್ಹವಾಗಿಯೇ ‘ಪಂದ್ಯಶ್ರೇಷ್ಠ’ ಹಾಗೂ ‘ಸರಣಿಶ್ರೇಷ್ಠ’ ಪ್ರಶಸ್ತಿಗಳಿಗೆ ಭಾಜನರಾದರು.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಆಸ್ಟ್ರೇಲಿಯದ ವಿರುದ್ಧ ಕಳೆದ ತಿಂಗಳು ಲಾರ್ಡ್ಸ್ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದಿರುವ ತಂಡದಲ್ಲಿದ್ದ ಬಹುತೇಕ ಆಟಗಾರರಿಗೆ ವಿಶ್ರಾಂತಿ ನೀಡಿತ್ತು.
ಕಳೆದ ವಾರ ಮೊದಲ ಟೆಸ್ಟ್ ಪಂದ್ಯವನ್ನು 328 ರನ್ ಗಳಿಂದ ಗೆದ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡವು ಝಿಂಬಾಬ್ವೆಗೆ ದುಬಾರಿಯಾಗಿ ಪರಿಣಮಿಸಿತು.
ದಕ್ಷಿಣ ಆಫ್ರಿಕಾ ತಂಡವು ಇದೀಗ ಸತತ 10ನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಅಕ್ಟೋಬರ್ ನಲ್ಲಿ ನಡೆಯಲಿರುವ ಮುಂದಿನ ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಝಿಂಬಾಬ್ವೆ ತಂಡವು ಈ ತಿಂಗಳಾಂತ್ಯದಲ್ಲಿ ಬುಲಾವಯೊದಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ್ದ 2 ಪಂದ್ಯಗಳ ಸರಣಿಯನ್ನು ಆಡಲಿದೆ.







