ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಸರಣಿ ಗೆದ್ದ ದಕ್ಷಿಣ ಆಫ್ರಿಕಾ
ಮೂರನೇ ಪಂದ್ಯದಲ್ಲಿ 176 ರನ್ ಜಯ, ಹಾರ್ಮರ್ಗೆ 10 ವಿಕೆಟ್ ಗಳ ಗೊಂಚಲು

Photo Credit : PTI
ಕೇಪ್ಟೌನ್, ಅ.31: ವೇಗದ ಬೌಲರ್ ಕಾಗಿಸೊ ರಬಾಡ (3-39) ಹಾಗೂ ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ (6-16) ಅವರ ಅಮೋಘ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿ 176 ರನ್ ಗಳ ಅಂತರದಿಂದ ಮಣಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡವು ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ತನಗೆ ದಕ್ಕಿರುವ ವಿಶ್ವದ ನಂ.1 ರ್ಯಾಂಕನ್ನು ಸಮರ್ಥಿಸಿಕೊಂಡಿತು.
ಐದನೇ ದಿನವಾದ ಶನಿವಾರ ನಾಲ್ಕನೇ ಇನಿಂಗ್ಸ್ ನಲ್ಲಿ 288 ರನ್ ಗಳಿಸುವ ಗುರಿ ಪಡೆದ ಆಸ್ಟ್ರೇಲಿಯ ತಂಡವು ಯಾವುದೇ ಹಂತದಲ್ಲಿ ಹೋರಾಟ ನೀಡದೆ ಕೇವಲ 111 ರನ್ ಗಳಿಗೆ ಆಲೌಟಾಯಿತು. ರಬಾಡ ಹೊಸ ಚೆಂಡಿನಲ್ಲಿ ಅಗ್ರ ಸರದಿಯ ಬ್ಯಾಟರ್ ಗಳಾದ ಮ್ಯಾಟ್ ರೆನ್ಶಾ (0), ಲ್ಯಾಬುಶೇನ್ (4 ರನ್) ಹಾಗೂ ಟ್ರಾವಿಸ್ ಹೆಡ್ (14 ರನ್) ಅವರ ವಿಕೆಟ್ ಗಳನ್ನು ಉರುಳಿಸಿ ಕಾಂಗರೂ ಪಡೆಯನ್ನು ಕಂಗಾಲಾಗಿಸಿದರು.
ಹಾರ್ಮರ್ ಎರಡನೇ ಇನಿಂಗ್ಸ್ ನಲ್ಲಿ 21.1 ಓವರ್ ಗಳಲ್ಲಿ 16 ರನ್ ಗಳಿಗೆ ಆರು ವಿಕೆಟ್ ಗಳನ್ನು ಪಡೆದು ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಪಂದ್ಯದಲ್ಲಿ 120 ರನ್ ನೀಡಿ 10 ವಿಕೆಟ್ ಗಳನ್ನು ಪಡೆದರು. ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿ 10 ವಿಕೆಟ್ ಗಳ ಗೊಂಚಲು ಪಡೆದರು. ಈ ಸಾಹಸಕ್ಕೆ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.
ಆಸ್ಟ್ರೇಲಿಯ ಪರ ನಾಲ್ಕನೇ ಕ್ರಮಾಂಕದಲ್ಲಿ ಕ್ಯಾಮರೂನ್ ಗ್ರೀನ್ 110 ಎಸೆತಗಳಲ್ಲಿ 27 ರನ್ ಗಳಿಸಿದರು. ಅಗ್ರ ಎಂಟು ಬ್ಯಾಟರ್ ಗಳ ಪೈಕಿ ಗ್ರೀನ್ ಮಾತ್ರ ಕನಿಷ್ಠ 30 ಎಸೆತಗಳನ್ನು ಎದುರಿಸಿದ್ದಾರೆ.
ನಾಯಕ ಪ್ಯಾಟ್ ಕಮಿನ್ಸ್ (11 ರನ್) ಹಾಗೂ ನಾಥನ್ ಲಿಯೊನ್ ಒಂಭತ್ತನೇ ವಿಕೆಟ್ ಗೆ 45 ರನ್ ಗಳ ಜೊತೆಯಾಟ ನಡೆಸಿದರು. ಇದು ಆಸ್ಟ್ರೇಲಿಯದ ಎರಡನೇ ಇನಿಂಗ್ಸ್ ನ ಶ್ರೇಷ್ಠ ಜೊತೆಯಾಟವಾಗಿದೆ.
ಅಗ್ರ ಸ್ಕೋರರ್ ಎನಿಸಿಕೊಂಡಿರುವ ಲಿಯೊನ್ (ಔಟಾಗದೆ 33 ರನ್, 57 ಎಸೆತ) ಆಸ್ಟ್ರೇಲಿಯ ಟೆಸ್ಟ್ನಲ್ಲಿ ಎರಡನೇ ಬಾರಿ 100 ರನ್ನೊಳಗೆ ಆಲೌಟ್ ಆಗುವುದನ್ನು ತಪ್ಪಿಸಿದರು. 1936-37ರಲ್ಲಿ ಆ್ಯಶಸ್ ಟೆಸ್ಟ್ನಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯವು 100 ರನ್ನೊಳಗೆ ಆಲೌಟಾಗಿತ್ತು.
ಮೊದಲ ಇನಿಂಗ್ಸ್ ನಲ್ಲಿ ಬರೋಬ್ಬರಿ 100 ರನ್ ಗಳ ಹಿನ್ನಡೆ ಕಂಡಿದ್ದ ದಕ್ಷಿಣ ಆಫ್ರಿಕಾ ತಂಡವು ತನ್ನ ಎರಡನೇ ಇನಿಂಗ್ಸ್ ನಲ್ಲಿ ವಿಯಾನ್ ಮುಲ್ಡರ್ (115 ರನ್) ಹಾಗೂ ರಯಾನ್ ರಿಕೆಲ್ಟನ್ (101 ರನ್) ಅವರ ಶತಕಗಳ ನೆರವಿನಿಂದ ಆರಂಭಿಕ ಕುಸಿತದಿಂದ ಚೇತರಿಸಿಕೊಂಡಿತು. ಅಂತಿಮವಾಗಿ 387 ರನ್ ಗಳಿಸಿ ಆಸ್ಟ್ರೇಲಿಯದ ಗೆಲುವಿಗೆ 288 ರನ್ ಗಳ ಗುರಿ ನೀಡಿತು.
ಐದನೇ ದಿನದಾಟದಲ್ಲಿ ಗೆಲ್ಲಲು ಕಠಿಣ ಗುರಿ ಪಡೆದಿದ್ದ ಆಸ್ಟ್ರೇಲಿಯ ತಂಡವು ಕೇವಲ 111 ರನ್ ಗಳಿಗೆ ಆಲೌಟಾಯಿತು. ಹಾರ್ಮರ್ ಟೆಸ್ಟ್ ಕ್ರಿಕೆಟ್ ನಲ್ಲಿ ಇದೇ ಮೊದಲ ಬಾರಿ 10 ವಿಕೆಟ್ ಗಳ ಗೊಂಚಲು ಪಡೆದು ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಒಟ್ಟು 198 ರನ್ ಹಾಗೂ 13 ವಿಕೆಟ್ ಗಳನ್ನು ಪಡೆದಿರುವ ಆಲ್ರೌಂಡರ್ ಮಾರ್ಕೊ ಜಾನ್ಸನ್ ‘ಸರಣಿಶ್ರೇಷ್ಠ’ ಪ್ರಶಸ್ತಿ ಪಡೆದರು.






