ಮ್ಯಾಚ್ ಫಿಕ್ಸಿಂಗ್ ಆರೋಪ: ಮಾಜಿ ನಂಬರ್ 1 ಬೌಲರ್ ಸಹಿತ ಮೂವರು ಕ್ರಿಕೆಟಿಗರ ಬಂಧನ
ಲೊನ್ವಾಬೊ ತ್ಸೊಟ್ಸೊಬೆ (credit: X/@Thekeycritic)
ಕೇಪ್ ಟೌನ್: 2015-16ನೇ ಸಾಲಿನ ರ್ಯಾಮ್ ಸ್ಲ್ಯಾಮ್ ಟಿ-20 ಚಾಲೆಂಜ್ ಟೂರ್ನಿಯಲ್ಲಿ ನಡೆದಿತ್ತೆನ್ನಲಾದ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಹಗರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಲೊನ್ವಾಬೊ ತ್ಸೊಟ್ಸೊಬೆ, ಥಾಮಿ ಸೋಲೆಕೈಲ್ ಹಾಗೂ ಎಥಿ ಎಂಭಲತಿ ಸೇರಿದಂತೆ ಒಟ್ಟು ಮೂವರು ದಕ್ಷಿಣ ಆಫ್ರಿಕಾ ಕ್ರಿಕೆಟಿಗರನ್ನು ಬಂಧಿಸಲಾಗಿದೆ. ಅವರ ವಿರುದ್ಧ ವಿವಿಧ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ ಭ್ರಷ್ಟ ಚಟುವಟಿಕೆಗಳ ನಿಯಂತ್ರಣ ಮತ್ತು ಹೋರಾಟ ಕಾಯ್ದೆ, 2004ರ ಸೆಕ್ಷನ್ 15ರ ಅಡಿ ಈ ಮೂವರು ಕ್ರಿಕೆಟಿಗರ ವಿರುದ್ಧ ಐದು ದೋಷಾರೋಪಗಳನ್ನು ಹೊರಿಸಲಾಗಿದೆ.
ದಕ್ಷಿಣ ಆಫ್ರಿಕಾದ ದೇಶೀಯ ಟೂರ್ನಿಯಲ್ಲಿನ ಪಂದ್ಯಗಳನ್ನು ತಿರುಚಲು ಭಾರತದ ಬುಕ್ಕಿಯೊಬ್ಬರ ಜೊತೆಗೂಡಿ ಈ ಮೂವರು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಮ್ಯಾಚ್ ಫಿಕ್ಸಿಂಗ್ ಗಾಗಿ ಲಂಚ ಸ್ವೀಕರಿಸಿದ ಆರೋಪವನ್ನು ತ್ಸೊಟ್ಸೊಬೆ, ಸೊಲೆಕೈಲ್ ಹಾಗೂ ಎಂಭಲತಿ ವಿರುದ್ಧ ಹೊರಿಸಲಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ನಲ್ಲಿ ಮನೆ ಮಾಡಿರುವ ಭ್ರಷ್ಟಾಚಾರವನ್ನು ಬಯಲುಗೊಳಿಸುವ ಹೊಂದಿರುವ, ಹಾಕ್ಸ್ ಎಂದೇ ಕರೆಯಲಾಗುವ ಆದ್ಯತಾ ಅಪರಾಧ ತನಿಖಾ ನಿರ್ದೇಶನಾಲಯವು ಈ ತನಿಖೆಯನ್ನು ನಡೆಸಿತ್ತು.
ಮ್ಯಾಚ್ ಫಿಕ್ಸಿಂಗ್ ಮಾಡುವ ಪಿತೂರಿಯು ಪಂದ್ಯಕ್ಕೂ ಮುನ್ನವೇ ಬಯಲಿಗೆ ಬಂದಿದ್ದರಿಂದ, ಅಂತಿಮವಾಗಿ ಈ ಮ್ಯಾಚ್ ಫಿಕ್ಸಿಂಗ್ ನಿಂದ ಯಾವುದೇ ಪಂದ್ಯದ ಮೇಲೆ ದುಷ್ಪರಿಣಾಮವುಂಟಾಗಲಿಲ್ಲ ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಸ್ಪಷ್ಟಪಡಿಸಿದೆ. ಆದರೆ, ಈ ಹಗರಣದಿಂದ ಕ್ರೀಡಾ ಸಮಗ್ರತೆಗೆ ಧಕ್ಕೆಯುಂಟಾಗಿದೆ ಎಂದೂ ಒಪ್ಪಿಕೊಂಡಿದೆ.
ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಕ್ರಿಕೆಟ್ ಸೌತ್ ಆಫ್ರಿಕಾ 2016ರಿಂದ 2017ರ ನಡುವೆ ನಿಷೇಧಿಸಿದ್ದ ಏಳು ಆಟಗಾರರ ಪೈಕಿ ತ್ಸೊಟ್ಸೊಬೆ, ಸೊಲೆಕೈಲ್ ಹಾಗೂ ಎಂಭಲತಿ ಕೂಡಾ ಸೇರಿದ್ದರು.