ಪಂದ್ಯದ ವೇಳೆ ಗೋಲ್ ಕೀಪರ್ ಗೆ ಢಿಕ್ಕಿ: ಹೃದಯಸ್ತಂಭನಕ್ಕೀಡಾಗಿದ್ದ ಸ್ಪ್ಯಾನಿಶ್ ಫುಟ್ ಬಾಲ್ ಆಟಗಾರ ಮೃತ್ಯು
ಮೈದಾನದಲ್ಲೇ ಕುಸಿದು ಬಿದ್ದಿದ್ದ ಟೆನೆರಿಫ್ ಕ್ಲಬ್ ನ 30 ವರ್ಷದ ಆಟಗಾರ ಜೀಸಸ್ ಡಿ ಮಿಗುಯೆಲ್

ಜೀಸಸ್ ಡಿ ಮಿಗುಯೆಲ್ | Photo Credit : X/@CDTOficial
ಟೆನೆರಿಫ್ (ಸ್ಪೇನ್): ಫುಟ್ ಬಾಲ್ ಪಂದ್ಯದ ವೇಳೆ ಎದುರಾಳಿ ತಂಡದ ಗೋಲ್ ಕೀಪರ್ ಗೆ ಢಿಕ್ಕಿ ಹೊಡೆದು ಹೃದಯಸ್ತಂಭನಕ್ಕೀಡಾಗಿದ್ದ ಸ್ಪೇನ್ ನ ಟೆನೆರಿಫ್ ಕ್ಲಬ್ ನ ಆಟಗಾರ ಜೀಸಸ್ ಡಿ ಮಿಗುಯೆಲ್ (30) ಮಂಗಳವಾರ ನಿಧನರಾಗಿದ್ದಾರೆ. ಅವರ ಸಾವಿನಿಂದ ಸ್ಪ್ಯಾನಿಶ್ ಫುಟ್ ಬಾಲ್ ವಲಯದಲ್ಲಿ ಶೋಕ ಆವರಿಸಿದೆ.
ಎರಡನೇ ಡಿವಿಷನ್ ನ ಪಂದ್ಯವೊಂದರಲ್ಲಿ ಈ ಘಟನೆ ನಡೆದಿತ್ತು. ಪಂದ್ಯದ ಏಳನೇ ನಿಮಿಷದಲ್ಲಿ ಎಫ್ಸಿ ಆ್ಯಂಡೊರಾ ತಂಡದ ಗೋಲ್ ಕೀಪರ್ ಜೀಸಸ್ ಒವೊನೊ ಅವರಿಗೆ ಡಿ ಮಿಗುಯೆಲ್ ಢಿಕ್ಕಿ ಹೊಡೆದಿದ್ದರು. ಢಿಕ್ಕಿಯ ಬಳಿಕ ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಆ ಸಮಯದಲ್ಲಿ ಪಂದ್ಯ 2-2 ಗೋಲುಗಳಿಂದ ಸಮಬಲದಲ್ಲಿತ್ತು.
ಕೂಡಲೇ ಮೈದಾನದಲ್ಲಿ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ರಾತ್ರಿ ವೇಳೆಗೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಬಳಿಕ ಅವರು ಚಿಕಿತ್ಸಿಗೆ ಸ್ಪಂದಿಸದೇ ಅವರು ಮೃತಪಟ್ಟರು.
ಡಿ ಮಿಗುಯೆಲ್ ಅವರ ಸಾವಿನ ಸುದ್ದಿಯನ್ನು ಟೆನೆರಿಫ್ ಕ್ಲಬ್ ಭಾವನಾತ್ಮಕ ಪ್ರಕಟಣೆಯ ಮೂಲಕ ಖಚಿತಪಡಿಸಿದೆ.
"ನಮಗೆ ಅಪಾರ ನೋವಾಗಿದೆ. ಈ ಸುದ್ದಿ ನಿಜವೆಂದು ನಂಬಲು ಸಾಧ್ಯವಾಗುತ್ತಿಲ್ಲ. ಜೀಸಸ್ ಡಿ ಮಿಗುಯೆಲ್ ನಿಧನರಾಗಿದ್ದಾರೆ ಎಂಬುದನ್ನು ಅತ್ಯಂತ ದುಃಖದಿಂದ ತಿಳಿಸುತ್ತಿದ್ದೇವೆ" ಎಂದು ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.






