ಅಂಧ ವನಿತೆಯರ ಟಿ20 ವಿಶ್ವಕಪ್ : ಪಾಕ್ ಆಟಗಾರ್ತಿಯರ ಕೈಕುಲುಕಿ ಕ್ರೀಡಾಸ್ಫೂರ್ತಿ ಮೆರೆದ ಭಾರತ

Photo : screengrab
ಕೊಲಂಬೊ: ಅಂಧ ವನಿತೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಎಂಟು ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಎದುರಾಳಿಗಳು ನೀಡಿದ 136 ರನ್ಗಳ ಸವಾಲನ್ನು ಕೇವಲ 10 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ತಲುಪುವ ಮೂಲಕ ಟೂರ್ನಿಯಲ್ಲಿ ಸತತ ಐದನೇ ಜಯ ದಾಖಲಿಸಿತು.
ಅಗ್ರ ಕ್ರಮಾಂಕದ ಆಟಗಾರರ ಕಳಪೆ ಪ್ರದರ್ಶನದಿಂದ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಒಂದು ಹಂತದಲ್ಲಿ 23 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿತ್ತು. ಆದರೆ ಮೆಹ್ರೀನ್ ಅಲಿ (66) ಮತ್ತು ಬುಶ್ರಾ ಅಶ್ರಫ್ (44) ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಭಾರತ ಈ ಪಂದ್ಯದಲ್ಲಿ ಏಳು ರನೌಟ್ ಮಾಡುವ ಮೂಲಕ ಗಮನ ಸೆಳೆಯಿತು.
ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಭಾರತದ ಪರ ನಾಯಕಿ ದೀಪಿಕಾ ಟಿಸಿ (45) ಮತ್ತು ಅನೇಖಾ ದೇವಿ (ಅಜೇಯ 64) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅನೇಖಾ ಅವರ ಭರ್ಜರಿ ಪ್ರದರ್ಶನದಿಂದ ಭಾರತ ಸೆಮೀಸ್ ಅರ್ಹತೆ ಸಂಪಾದಿಸಿತು.
ಉಭಯ ದೇಶಗಳ ನಡುವಿನ ಹಳಸಿದ ಸಂಬಂಧದ ನಡುವೆ ಗಮನ ಸೆಳೆದ ಅಂಶವೆಂದರೆ, ಉಭಯ ತಂಡಗಳ ಆಟಗಾರ್ತಿಯರು ಪರಸ್ಪರ ಹಸ್ತಲಾಘವ ನೀಡಿ ಕ್ರೀಡಾಸ್ಫೂರ್ತಿ ಮೆರೆದದ್ದು. ಟಾಸ್ ಸಂದರ್ಭದಲ್ಲಿ ಹ್ಯಾಂಡ್ಶೇಕ್ ಇಲ್ಲದಿದ್ದರೂ, ಪಂದ್ಯದ ಬಳಿಕ ಭಾರತ ತಂಡದ ಆಟಗಾರ್ತಿಯರು ಹಸ್ತಲಾಘವ ನೀಡಿದರು.
ಇತ್ತೀಚೆಗೆ ನಡೆದ ಏಷ್ಯಾ ಕಪ್, ವನಿತಾ ವಿಶ್ವಕಪ್ ಹಾಗೂ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಪಂದ್ಯಗಳಲ್ಲಿ ಉಭಯ ತಂಡಗಳ ಆಟಗಾರರು ಹಸ್ತಲಾಘವ ನೀಡಿರಲಿಲ್ಲ ಎನ್ನುವುದು ಗಮನಾರ್ಹ.







