ಏಶ್ಯನ್ ಗೇಮ್ಸ್ ಪ್ರದರ್ಶನದ ಕುರಿತು ಅ.13ರಂದು ಕ್ರೀಡಾ ಸಚಿವಾಲಯ ಪರಿಶೀಲನೆ

Photo Credit : PTI
ಹೊಸದಿಲ್ಲಿ: ಭಾರತದ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ ಮತ್ತು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಅಧಿಕಾರಿಗಳು ಐಚಿ-ನಗೋಯದಲ್ಲಿ ಇತ್ತೀಚೆಗೆ ನಡೆದಿದ್ದ 2026ರ ಏಶ್ಯನ್ ಗೇಮ್ಸ್ನಲ್ಲಿ ಭಾರತದ ಪ್ರದರ್ಶನವನ್ನು ಅಕ್ಟೋಬರ್ 13ರಂದು ಪರಿಶೀಲಿಸಲಿದ್ದಾರೆ.
ಏಶ್ಯನ್ ಕ್ರೀಡಾಕೂಟದಲ್ಲಿ ಭಾರತವು ಒಟ್ಟು 85 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಇದು ಹಿಂದಿನ ಕ್ರೀಡಾಕೂಟಕ್ಕೆ ಹೋಲಿಸಿದರೆ 21 ಪದಕಗಳ ಕುಸಿತವಾಗಿದೆ.
‘ನಾವು ಪರಿಶೀಲನೆ ನಡೆಸುವ ಅಗತ್ಯವಿದೆ. ಅನೇಕ ವಿಷಯಗಳನ್ನು ಬದಲಾಯಿಸಬೇಕಾಗಿದೆ. ಅನುಭವಿ ಕ್ರೀಡಾಪಟುಗಳ ಮೇಲೆ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿದೆ. ಆದರೆ ಅವರು ಪದಕ ಗೆಲ್ಲಲಿಲ್ಲ. ಕ್ರೀಡಾ ಒಕ್ಕೂಟಗಳು ಅಕ್ಟೋಬರ್ 13ರಂದು ಕ್ರೀಡಾ ಸಚಿವಾಲಯದೊಂದಿಗೆ ಸೇರಿ ಈ ಕುರಿತು ಪರಿಶೀಲನೆ ನಡೆಸಲಿವೆ’ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.
ಪದಕ ಗೆಲ್ಲದ ಕೆಲವು ಹಿರಿಯ ಕ್ರೀಡಾಪಟುಗಳ ಕುರಿತು ಸಚಿವಾಲಯದ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರದ ಪ್ರಮುಖ ಯೋಜನೆಯಾದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್(ಟಾಪ್ಸ್)ಮೂಲಕ ಬಿಡುಗಡೆಯಾದ ನಿಧಿಯ ಬಳಕೆಯನ್ನು ಕೂಡ ಮೌಲ್ಯ ಮಾಪನ ಮಾಡಲಾಗುತ್ತದೆ.
‘ಕ್ರೀಡಾಕೂಟದ ಸ್ಥಳಕ್ಕೆ ತಲುಪಿದ ನಂತರ ಕೆಲವು ಕ್ರೀಡಾಪಟುಗಳು ತಾವು ಗಾಯಗೊಂಡಿರುವುದಾಗಿ ತಿಳಿಸಿದ್ದರು. ಅವರನ್ನು ಸಿದ್ಧಪಡಿಸಲು ಕೋಟ್ಯಂತರ ಹಣ ಖರ್ಚು ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಕ್ರೀಡಾಕೂಟಕ್ಕಾಗಿ ಕ್ರೀಡಾಪಟುಗಳನ್ನು ಸಿದ್ಧಪಡಿಸುವ ಮೂರು ವರ್ಷಗಳ ಅವಧಿಯಲ್ಲಿ ಕ್ರೀಡಾ ಸಚಿವಾಲಯವು 700 ಕೋಟಿ.ರೂ.ಗೂ ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ.






