Asian Games | ಸ್ಕ್ವಾಶ್: ಅನಾಹತ್ ಸಿಂಗ್ ಫೈನಲ್ಗೆ
ಏಶ್ಯನ್ ಗೇಮ್ಸ್ ಮಹಿಳಾ ಸಿಂಗಲ್ಸ್ನಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಸಾಧನೆ

ಅನಾಹತ್ ಸಿಂಗ್ | Photo Credit : X
ನಗೋಯ: ಏಶ್ಯನ್ ಗೇಮ್ಸ್ನ ಸ್ಕ್ವಾಶ್ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ, ಭಾರತದ ಯುವ ಪ್ರತಿಭೆ ಅನಾಹತ್ ಸಿಂಗ್ ಶನಿವಾರ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದ್ದಾರೆ. ಏಶ್ಯನ್ ಗೇಮ್ಸ್ನಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರ್ತಿಯಾಗಿ ಅವರು ಹೊರಹೊಮ್ಮಿದ್ದಾರೆ.
ನಗೋಯದ ಕಿಂಜೊ ಫುಟೊ ಅರೀನಾದಲ್ಲಿ ನಡೆದ ಸೆಮಿಫೈನಲ್ನಲ್ಲಿ, ಹದಿನೆಂಟು ವರ್ಷದ ಅನಾಹತ್ ಜಪಾನ್ನ ಆರನೇ ವಿಶ್ವ ರ್ಯಾಂಕಿಂಗ್ನ ಆಟಗಾರ್ತಿ ಸಟೋಮಿ ವಟನಬೆಯನ್ನು ಆರಂಭಿಕ ಹಿನ್ನಡೆಯ ಹೊರತಾಗಿಯೂ 9-11, 11-13, 12-10, 11-6, 11-3 ಗೇಮ್ಗಳಿಂದ ಸೋಲಿಸಿದರು.
ಉನ್ನತ ಶ್ರೇಯಾಂಕದ ಜಪಾನಿ ಆಟಗಾರ್ತಿಯ ವಿರುದ್ಧ ಮೊದಲ ಎರಡು ಗೇಮ್ಗಳನ್ನು ಕಳೆದುಕೊಂಡು, ಎರಡು ಮ್ಯಾಚ್ ಪಾಯಿಂಟ್ಗಳ ಹಿನ್ನಡೆಯಲ್ಲಿದ್ದಾಗ 13ನೇ ವಿಶ್ವ ರ್ಯಾಂಕಿಂಗ್ನ ಆಟಗಾರ್ತಿ ಅನಾಹತ್ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಗಬಹುದು ಎಂದು ಎಲ್ಲರೂ ಭಾವಿಸಿದರು.
ಪಂದ್ಯದ ನಡುವೆ ವಟನಬೆ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅನಾಹತ್ ಅವರ ಮುಖಕ್ಕೆ ಪೆಟ್ಟಾಗಿದ್ದಲ್ಲದೆ, ಬೆರಳಿಗೆ ಗಾಯವಾಗಿ ವೈದ್ಯಕೀಯ ಚಿಕಿತ್ಸೆಯನ್ನೂ ಪಡೆಯಬೇಕಾಯಿತು.
ಆದರೆ, ಸೋಲಿನ ಅಂಚಿನಲ್ಲಿದ್ದ ಅನಾಹತ್ 3ನೇ ಗೇಮ್ನಲ್ಲಿ ಅದ್ಭುತವಾಗಿ ಪುಟಿದೆದ್ದು ಬಂದರು. ಬಳಿಕ ಆ ಲಯವನ್ನು ಮುಂದುವರಿಸಿ, ಕೊನೆಯ ಎರಡು ಗೇಮ್ಗಳಲ್ಲಿ ವಟನಬೆ ಅವರ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.
ದೀಪಿಕಾ ಪಳ್ಳಿಕಲ್ (ಎರಡು ಬಾರಿ) ಮತ್ತು ಜೋಶ್ನಾ ಚಿನ್ನಪ್ಪ ಗೆದ್ದಿರುವ ಕಂಚಿನ ಪದಕಗಳು ಈ ಸ್ಪರ್ಧೆಯಲ್ಲಿ ಭಾರತದ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.
ಇದು ಏಶ್ಯನ್ ಗೇಮ್ಸ್ ಸ್ಕ್ವಾಶ್ನಲ್ಲಿ ಅನಾಹತ್ರ ಎರಡನೇ ಪದಕವಾಗಲಿದೆ. 2023ರ ಹ್ಯಾಂಗ್ಝೂ ಗೇಮ್ಸ್ನಲ್ಲಿ, ಮಿಶ್ರ ಡಬಲ್ಸ್ನಲ್ಲಿ ಅವರು ಅಭಯ್ ಸಿಂಗ್ ಜೊತೆಗೆ ಕಂಚಿನ ಪದಕ ಗೆದ್ದಿದ್ದಾರೆ.
ಜೋಶ್ನಾ, ವೇಲವನ್ಗೆ ಕಂಚು : ಮಿಶ್ರ ಡಬಲ್ಸ್ ಸೆಮಿಫೈನಲ್ನಲ್ಲಿ ಸೋಲು
ಏಶ್ಯನ್ ಗೇಮ್ಸ್ನಲ್ಲಿ, ಸ್ಕ್ವಾಶ್ ಮಿಶ್ರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರ ಭಾರತದ ಜೋಶ್ನಾ ಚಿನ್ನಪ್ಪ ಮತ್ತು ವೇಲವನ್ ಸೆಂಥಿಲ್ಕುಮಾರ್ ಜೋಡಿಯು ಹಾಂಕಾಂಗ್ ಚೀನಾದ ಲೀ ಕಾ ಯಿ ಮತ್ತು ಟ್ಯಾಂಗ್ ಮಿಂಗ್ ಹಾಂಗ್ ವಿರುದ್ಧ 10-11, 11-2, 10-11 ಗೇಮ್ಗಳಿಂದ ಸೋಲನುಭವಿಸಿದೆ. ಇದರೊಂದಿಗೆ ಅದು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿತು.
ಮೂರನೇ ಗೇಮ್ನಲ್ಲಿ ನಿರ್ಣಾಯಕ ಪಾಯಿಂಟ್ ತಮಗೆ ಸಿಕ್ಕಿತು ಎಂದೇ ಭಾವಿಸಿದ ಜೋಶ್ನಾ ಮತ್ತು ವೇಲವನ್ ಸಂಭ್ರಮಾಚರಣೆ ಆರಂಭಿಸಿದ್ದರು. ಆದರೆ ಅಂಪೈರ್ಗಳು ಅದನ್ನು ‘ಲೆಟ್’ ಎಂದು ಘೋಷಿಸಿದರು. ಆಗ ಆ ಪಾಯಿಂಟ್ಗಾಗಿ ಮರುಆಟ ಆಡಬೇಕಾಯಿತು. ಆದರೆ, ಮರುಆಟದಲ್ಲಿ ಆ ಅಂಕ ಕೈತಪ್ಪಿತು.
2023ರಲ್ಲಿ ಹ್ಯಾಂಗ್ಝೂನಲ್ಲಿ ನಡೆದಿದ್ದ ಹಿಂದಿನ ಏಶ್ಯನ್ ಗೇಮ್ಸ್ನಲ್ಲಿ ಇದೇ ವಿಭಾಗದಲ್ಲಿ ಭಾರತ ಚಿನ್ನದ ಪದಕ ಜಯಿಸಿತ್ತು. ಅಂದಿನ ಫೈನಲ್ ಪಂದ್ಯದಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಂಧು ಜೋಡಿಯು ಮಲೇಶ್ಯದ ಮುಹಮ್ಮದ್ ಶಾಫಿಕ್ ಕಮಾಲ್ ಮತ್ತು ಐಫಾ ಅಜ್ಮಾನ್ ವಿರುದ್ಧ ಜಯಗಳಿಸಿತ್ತು. ಮೂರು ವರ್ಷಗಳ ಹಿಂದೆ ಅಭಯ್ ಸಿಂಗ್ ಮತ್ತು ಅನಾಹತ್ ಸಿಂಗ್ ಕೂಡ ಕಂಚಿನ ಪದಕ ಗೆದ್ದಿದ್ದರು






