ಕೇರಳ ಕ್ರಿಕೆಟ್ ಸಂಸ್ಥೆ ವಿರುದ್ಧ ಹೇಳಿಕೆ: ಶ್ರೀಶಾಂತ್ಗೆ ಮೂರು ವರ್ಷಗಳ ಅಮಾನತು ಶಿಕ್ಷೆ

ಎಸ್.ಶ್ರೀಶಾಂತ್ | PC : NDTV
ತಿರುವನಂತಪುರಂ: ಸಂಜು ಸ್ಯಾಮ್ಸನ್ ಅವರನ್ನು ಚಾಂಪಿಯನ್ಸ್ ಟ್ರೋಫಿಯಿಂದ ಕೈಬಿಟ್ಟ ಕುರಿತು ಉದ್ಭವವಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಸುಳ್ಳು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಭಾರತ ತಂಡದ ಮಾಜಿ ಆಟಗಾರ ಎಸ್.ಶ್ರೀಶಾಂತ್ರನ್ನು ಕೇರಳ ಕ್ರಿಕೆಟ್ ಸಂಸ್ಥೆ (KCA) ಮೂರು ವರ್ಷಗಳ ಕಾಲ ಅಮಾನತುಗೊಳಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕೇರಳ ರಾಜ್ಯ ಕ್ರಿಕೆಟ್ ಒಕ್ಕೂಟ, ಎಪ್ರಿಲ್ 30ರಂದು ಕೊಚ್ಚಿಯಲ್ಲಿ ನಡೆದ ತನ್ನ ಕೇಂದ್ರೀಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಸದ್ಯ ಎಸ್.ಶ್ರೀಶಾಂತ್ ಅವರು ಕೇರಳ ಕ್ರಿಕೆಟ್ ಲೀಗ್ನ ಫ್ರಾಂಚೈಸಿ ತಂಡವಾದ ಕೊಲ್ಲಂ ಏರೀಸ್ನ ಸಹ ಮಾಲಕರಾಗಿದ್ದಾರೆ.
ಇದಕ್ಕೂ ಮುನ್ನ, ಎಸ್.ಶ್ರೀಶಾಂತ್ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಶ್ರೀಶಾಂತ್ ಅಲ್ಲದೆ, ಕೇರಳ ಕ್ರಿಕೆಟ್ ಲೀಗ್ನ ಫ್ರಾಂಚೈಸಿ ತಂಡಗಳಾದ ಕೊಲ್ಲಂ ಏರೀಸ್, ಅಲಪ್ಪುಳ ಟೀಮ್ ಲೀಡ್ ಹಾಗೂ ಅಲಪ್ಪುಳ ರಿಪಲ್ಸ್ಗೂ ಶೋಕಾಸ್ ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ.
"ನಮ್ಮ ನೋಟಿಸ್ಗಳಿಗೆ ಫ್ರಾಂಚೈಸಿ ತಂಡಗಳು ಸಮಾಧಾನಕರ ಉತ್ತರ ನೀಡಿರುವುದರಿಂದ, ಅವುಗಳ ವಿರುದ್ಧ ಯಾವುದೇ ಮುಂದಿನ ಕ್ರಮ ಜರುಗಿಸುತ್ತಿಲ್ಲ. ಆದರೆ, ತಂಡದ ಆಡಳಿತ ಮಂಡಳಿಗೆ ಸದಸ್ಯರನ್ನು ನೇಮಕ ಮಾಡುವಾಗ ತುಂಬಾ ಜಾಗರೂಕವಾಗಿರಬೇಕು ಎಂದು ಸಲಹೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಸಂಜು ಸ್ಯಾಮ್ಸನ್ ಹೆಸರು ಬಳಸಿಕೊಂಡು ನಿರಾಧಾರ ಆರೋಪಗಳನ್ನು ಮಾಡಿರುವ ಸಂಜು ಸ್ಯಾಮ್ಸನ್ ತಂದೆ ಸ್ಯಾಮ್ಸನ್ ವಿಶ್ವನಾಥ್ ಹಾಗೂ ಇನ್ಗಿಬ್ಬರ ವಿರುದ್ಧ ಪರಿಹಾರ ದಾವೆಯನ್ನು ಹೂಡಲೂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಮಲಯಾಳಂ ದೂರದರ್ಶನ ವಾಹಿನಿಯಲ್ಲಿ ನಡೆದಿದ್ದ ಪ್ಯಾನೆಲ್ ಚರ್ಚೆಯ ವೇಳೆ, ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಸಂಜು ಸ್ಯಾಮ್ಸನ್ರೊಂದಿಗೆ ಸಂಬಂಧ ಕಲ್ಪಿಸಿ, ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪದ ಮೇಲೆ ಎಸ್.ಶ್ರೀಶಾಂತ್ಗೂ ಕೇರಳ ರಾಜ್ಯ ಕ್ರಿಕೆಟ್ ಒಕ್ಕೂಟ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಈ ನೋಟಿಸ್ ಅನ್ನು ಸಂಜು ಸ್ಯಾಮ್ಸನ್ರನ್ನು ಬೆಂಬಲಿಸಿದ ಕಾರಣಕ್ಕೆ ಜಾರಿಗೊಳಿಸಲಾಗಿಲ್ಲ. ಬದಲಿಗೆ, ರಾಜ್ಯ ಕ್ರಿಕೆಟ್ ಸಂಸ್ಥೆಯ ವಿರುದ್ಧ ದಾರಿ ತಪ್ಪಿಸುವ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಜಾರಿಗೊಳಿಸಲಾಗಿದೆ ಎಂದು ಕೇರಳ ರಾಜ್ಯ ಕ್ರಿಕೆಟ್ ಒಕ್ಕೂಟ ಸ್ಪಷ್ಟಪಡಿಸಿದೆ.







