ಪೋರ್ಚುಗಲ್ ಅತ್ಲೆಟಿಕ್ಸ್ ಕ್ರೀಡಾಕೂಟ | ಲಾಂಗ್ ಜಂಪ್ ನಲ್ಲಿ ಭಾರತದ ಮುರಳಿ ಶ್ರೀಶಂಕರ್ ಗೆ ಪ್ರಶಸ್ತಿ

Photo : thehindu
ಹೊಸದಿಲ್ಲಿ, ಜು. 20: ಪೋರ್ಚುಗಲ್ ನ ಮಯದಲ್ಲಿ ನಡೆಯುತ್ತಿರುವ ‘ಮೀಟಿಂಗ್ ಮಯ ಸಿಡಾಡ್ ಡು ಡೆಸ್ಪೋರ್ಟೊ’ ಕ್ರೀಡಾಕೂಟದಲ್ಲಿ ಭಾರತೀಯ ಲಾಂಗ್ಜಂಪ್ ಪಟು ಮುರಳಿ ಶ್ರೀಶಂಕರ್ ಪ್ರಶಸ್ತಿ ಗೆದ್ದಿದ್ದಾರೆ.
ಇದು ವರ್ಲ್ಡ್ ಅತ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಕಂಚಿನ ಪದಕದ ಮಟ್ಟದ ಕ್ರೀಡಾಕೂಟವಾಗಿದೆ.
ಶನಿವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ, ಏಶ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಮುರಳಿ ಶ್ರೀಶಂಕರ್ ಎರಡನೇ ಸುತ್ತಿನಲ್ಲಿ ತನ್ನ ಶ್ರೇಷ್ಠ ಪ್ರದರ್ಶನವನ್ನು ನೀಡಿದರು.
ಶ್ರೀಶಂಕರ್ ಮೊದಲ ಸುತ್ತಿನಲ್ಲಿ 7.63 ಮೀಟರ್ ದೂರ ಹಾರಿದರು. ಬಳಿಕ, ಎರಡನೇ ಸುತ್ತಿನಲ್ಲಿ ಜಿಗಿತದ ಅಂತರವನ್ನು 7.75 ಮೀಟರ್ಗೆ ಹೆಚ್ಚಿಸಿಕೊಂಡರು. ಮೂರನೇ ಸುತ್ತಿನಲ್ಲಿ 7.69 ಮೀಟರ್ ದೂರ ಹಾರಿದರು.
ಪೋಲ್ಯಾಂಡ್ನ ಪಯೋಟರ್ ಟರ್ಕೊವ್ಸ್ಕಿ 7.75 ಮೀಟರ್ ದೂರ ಹಾರಿ ಶ್ರೀಶಂಕರ್ರ ಸಾಧನೆಯನ್ನು ಸರಿಗಟ್ಟಿದರು. ಆದರೆ ಅವರ ಎರಡನೇ ಶ್ರೇಷ್ಠ ನೆಗೆತ 7.58 ಮೀಟರ್ ಶ್ರೀಶಂಕರ್ರ 7.69 ಮೀಟರ್ಗಿಂತ ಕಡಿಮೆಯಾಯಿತು.
ವರ್ಲ್ಡ್ ಅತ್ಲೆಟಿಕ್ಸ್ ನಿಯಮಗಳಂತೆ, ಇಬ್ಬರು ಸ್ಪರ್ಧಿಗಳು ಸಮಬಲರಾದರೆ, ಅವರ ಎರಡನೇ ಶ್ರೇಷ್ಠ ಸಕ್ರಮ ನೆಗೆತವನ್ನು ಟೈಬ್ರೇಕರ್ ಆಗಿ ಉಪಯೋಗಿಸಲಾಗುವುದು.
ಸೆಪ್ಟಂಬರ್ ನಲ್ಲಿ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ ಗೆ ಅರ್ಹತೆ ಪಡೆಯಲು ಶ್ರೀಶಂಕರ್ ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನೇರ ಅರ್ಹತೆ ಪಡೆಯುವ ಮಾನದಂಡ 8.27 ಮೀಟರ್ ನೆಗೆತವಾಗಿದೆ.







