ನಿಸ್ಸಂಕ ಶತಕ | ಮೊದಲ ಇನಿಂಗ್ಸ್ನಲ್ಲಿ ಲಂಕಾ ದಾಪುಗಾಲು

ಪತುಮ್ ನಿಸ್ಸಂಕರ | PC ; ICC
ಕೊಲಂಬೊ: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ನ ಎರಡನೇ ದಿನವಾದ ಗುರುವಾರ ಪತುಮ್ ನಿಸ್ಸಂಕರ ಸತತ ಎರಡನೇ ಶತಕದ ನೆರವಿನಿಂದ ಶ್ರೀಲಂಕಾ ಮೊದಲ ಇನಿಂಗ್ಸ್ ನಲ್ಲಿ ತನ್ನ ಸ್ಥಿತಿಯನ್ನು ಭದ್ರಪಡಿಸಿಕೊಂಡಿದೆ. ಎರಡನೇ ದಿನದಾಟದ ಮುಕ್ತಾಯಕ್ಕೆ ಶ್ರೀಲಂಕಾ ಎರಡು ವಿಕೆಟ್ ಗಳ ನಷ್ಟಕ್ಕೆ 290 ರನ್ ಗಳಿಸಿದೆ.
ಇದಕ್ಕೂ ಮೊದಲು ಬಾಂಗ್ಲಾದೇಶವು 247 ರನ್ಗೆ ತನ್ನ ಮೊದಲ ಇನಿಂಗ್ಸ್ ಮುಗಿಸಿತ್ತು. ಈಗ ಶ್ರೀಲಂಕಾವು 43 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆಯಲ್ಲಿದೆ.
ಆರಂಭಿಕ ಬ್ಯಾಟರ್ ನಿಸ್ಸಂಕ 238 ಎಸೆತಗಳಲ್ಲಿ 146 ರನ್ ಗಳಿಸಿ ಔಟಾಗದೆ ಕ್ರೀಸ್ ನಲ್ಲಿ ಉಳಿದಿದ್ದಾರೆ. ಅವರ ಅಜೇಯ ಇನಿಂಗ್ಸ್ ನಲ್ಲಿ 18 ಬೌಂಡರಿಗಳಿವೆ. ಇದು 18 ಟೆಸ್ಟ್ ಪಂದ್ಯಗಳಲ್ಲಿ ಅವರ ನಾಲ್ಕನೇ ಟೆಸ್ಟ್ ಶತಕವಾಗಿದೆ. ಇದಕ್ಕೂ ಮೊದಲು, ಕಳೆದ ವಾರ ಗಾಲೆಯಲ್ಲಿ ನಡೆದ ಡ್ರಾಗೊಂಡ ಮೊದಲ ಟೆಸ್ಟ್ ನಲ್ಲಿ ಅವರು ತನ್ನ ಜೀವನಶ್ರೇಷ್ಠ 187 ರನ್ ಗಳನ್ನು ಸಿಡಿಸಿದ್ದರು.
ನಿಸ್ಸಂಕ ಮತ್ತು ದಿನೇಶ್ ಚಂಡಿಮಾಲ್ ಎರಡನೇ ವಿಕೆಟ್ ಗೆ 194 ರನ್ ಗಳ ಜೊತೆಯಾಟ ನಿಭಾಯಿಸಿ ಬಾಂಗ್ಲದೇಶಿ ಬೌಲರ್ ಗಳ ಬೆವರಿಳಿಸಿದರು.
ದುರದೃಷ್ಟವಶಾತ್ ಚಂಡಿಮಾಲ್ ಏಳು ರನ್ ಗಳಿಂದ ಶತಕ ವಂಚಿತರಾದರು. ಅವರು 153 ಎಸೆತಗಳಲ್ಲಿ 93 ರನ್ ಗಳಿಸಿದ್ದಾಗ ನಯೀಮ್ ಹಸನ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಹೋಗಿ ವಿಕೆಟ್ ಕೀಪರ್ ಲಿಟನ್ ದಾಸ್ ಗೆ ಕ್ಯಾಚ್ ನೀಡಿದರು.
ನೈಟ್ ವಾಚ್ ಮನ್ ಆಗಿ ಬಂದ ಪ್ರಬಾತ್ ಜಯಸೂರ್ಯ 5 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ನಿಸ್ಸಂಕ ಮತ್ತು ಇನ್ನೋರ್ವ ಆರಂಭಿಕ ಲಹಿರು ಉಡಾರ ಶ್ರೀಲಂಕಾಗೆ ಉತ್ತಮ ಆರಂಭವನ್ನು ನೀಡಿದರು. ಅವರು ಮೊದಲ ವಿಕೆಟ್ಗೆ 88 ರನ್ ಗಳನ್ನು ಕೂಡಿಸಿದರು. ಉಡಾರ 65 ಎಸೆತಗಳಲ್ಲಿ 40 ರನ್ ಗಳನ್ನು ಗಳಿಸಿದರು. ಅವರು ತೈಜುಲ್ ಇಸ್ಲಾಮ್ ಗೆ ವಿಕೆಟ್ ಒಪ್ಪಿಸಿದರು.
ನಿರಂತರವಾಗಿ ಗಂಟೆಗೆ 144 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದರೂ ವೇಗಿ ನಹೀದ್ ರಾಣಾಗೆ ನಿಸ್ಸಂಕ ಮತ್ತು ಚಂಡಿಮಾಲ್ರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬೌನ್ಸರ್ಗಳ ಮೂಲಕ ಅವರನ್ನು ಎದುರಿಸುವ ಪ್ರಯತ್ನವೂ ಫಲ ನೀಡಲಿಲ್ಲ.
ಇದಕ್ಕೂ ಮೊದಲು, ಬಾಂಗ್ಲಾದೇಶವು 8 ವಿಕೆಟ್ ನಷ್ಟಕ್ಕೆ 220 ರನ್ ಇದ್ದಲ್ಲಿಂದ ತನ್ನ ಮೊದಲ ಇನಿಂಗ್ಸನ್ನು ಮುಂದುವರಿಸಿತು. ಕೊನೆಯ ಎರಡು ವಿಕೆಟ್ ಗಳನ್ನು ಕಳೆದುಕೊಳ್ಳುವ ಮುನ್ನ ಅದಕ್ಕೆ 27 ರನ್ ಗಳನ್ನು ಸೇರಿಸಲು ಸಾಧ್ಯವಾಯಿತು.
ಚೊಚ್ಚಲ ಟೆಸ್ಟ್ ಆಡುತ್ತಿರುವ ಎಡಗೈ ಸ್ಪಿನ್ನರ್ ಸೊನಾಲ್ ದಿನುಶ 22 ರನ್ ಗಳನ್ನು ನೀಡಿ ಮೂರು ವಿಕೆಟ್ ಗಳನ್ನು ಉರುಳಿಸಿದರು. ಅದೇ ವೇಳೆ, ವೇಗಿ ಅಸಿತ ಫೆರ್ನಾಂಡೊ 51 ರನ್ ಗಳನ್ನು ಕೊಟ್ಟು ಮೂರು ವಿಕೆಟ್ ಗಳನ್ನು ಪಡೆದರು.
►ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ ಮೊದಲ ಇನಿಂಗ್ಸ್ (79.3 ಓವರ್ಗಳಲ್ಲಿ ಆಲೌಟ್) 247
ಶದ್ಮನ್ ಇಸ್ಲಾಮ್ 46, ಮುಶ್ಫೀಕುರ್ರಹೀಮ್ 35, ಲಿಟನ್ ದಾಸ್ 34, ಮೆಹಿದಿ ಹಸನ್ ಮೀರಝ್ 31, ತೈಜುಲ್ ಇಸ್ಲಾಮ್ 33
ಅಸಿತ ಫೆರ್ನಾಂಡೊ 3-51, ವಿಶ್ವ ಫೆರ್ನಾಂಡೊ 2-45, ಸೊನಾಲ್ ದಿನುಶ 3-22
ಶ್ರೀಲಂಕಾ ಮೊದಲ ಇನಿಂಗ್ಸ್ (78 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ) 290
ಪತುಮ್ ನಿಸ್ಸಂಕ 146 (ಅಜೇಯ), ಲಹಿರು ಉಡಾರ 40, ದಿನೇಶ್ ಚಂಡಿಮಾಲ್ 93, ಪ್ರಭಾತ್ ಜಯಸೂರ್ಯ (ಅಜೇಯ) 5







