ಶ್ರೀಲಂಕಾಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕನ ಬಂಧನ ಸಾಧ್ಯತೆ

PC | timesofindia
ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದೇಶಕ್ಕೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಅರ್ಜುನ ರಣತುಂಗ ಅವರು ದೇಶದ ಪೆಟ್ರೋಲಿಯಂ ಸಚಿವರಾಗಿದ್ದ ವೇಳೆ ಅವರ ವಿರುದ್ಧ ಕೇಳಿಬಂದಿದ್ದ ಲಂಚ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲು ಉದ್ದೇಶಿಸಿರುವುದಾಗಿ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಧೀರ್ಘಕಾಲಿಕ ಗುತ್ತಿಗೆ ನೀಡುವ ಕಾನೂನಾತ್ಮಕ ಪ್ರಕ್ರಿಯೆಯನ್ನು ತಿರುಚಿ ಅಧಿಕ ಬೆಲೆಗೆ ಸ್ಥಳದಲ್ಲೇ ಖರೀದಿಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ರಣತುಂಗ ಹಾಗೂ ಅವರ ಸಹೋದರ ಪ್ರಮುಖ ಆರೋಪಿಗಳಾಗಿದ್ದಾರೆ.
"ಒಟ್ಟು ಇಂಥ 27 ಖರೀದಿಗಳಿಂದ ಸರ್ಕಾರಿ ಬೊಕ್ಕಸಕ್ಕೆ 800 ದಶಲಕ್ಷ ರೂಪಾಯಿ ನಷ್ಟವಾಗಿದೆ" ಎಂದು ಲಂಚ ಅಥವಾ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಆಯೋಗ ನ್ಯಾಯಾಲಯಕ್ಕೆ ತಿಳಿಸಿದೆ. 2017ರಲ್ಲಿ ಈ ಒಪ್ಪಂದ ಮಾಡಿಕೊಳ್ಳುವ ವೇಳೆ ಈ ಮೊತ್ತ 50 ಲಕ್ಷ ಡಾಲರ್ ಆಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರ್ಜುನ ರಣತುಂಗಾ ಪ್ರಸ್ತುತ ಹೊರದೇಶದಲ್ಲಿದ್ದು, ದೇಶಕ್ಕೆ ಮರಳಿದ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದು ಆಯೋಗ ಕೊಲಂಬೊ ಮ್ಯಾಜಿಸ್ಟ್ರೇಟ್ ಅಸಂಗ ಬೊದರಗಾಮ ಅವರಿಗೆ ತಿಳಿಸಿದೆ. ರಣತುಂಗ ಅವರ ಅಣ್ಣ ಧಮ್ಮಿಕಾ ರಣತುಂಗ, ಈ ಗುತ್ತಿಗೆ ನೀಡಿದ ಸಮಯದಲ್ಲಿ ಸರ್ಕಾರಿ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ನ ಅಧ್ಯಕ್ಷರಾಗಿದ್ದರು. ಅವರನ್ನು ಸೋಮವಾರ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಮೆರಿಕ ಹಾಗೂ ಶ್ರೀಲಂಕಾ ಪೌರತ್ವ ಹೊಂದಿರುವ ಧಮ್ಮಿಕಾ ವಿರುದ್ಧ ಪ್ರಯಾಣ ನಿಷೇಧ ಹೇರಲಾಗಿದೆ.







