ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ

ಹಸರಂಗ | Photo: NDTV Sports
ಹೊಸದಿಲ್ಲಿ: ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗ ಮಂಗಳವಾರ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದಾರೆ. ಸೀಮಿತ ಓವರ್ ಕ್ರಿಕೆಟ್ ನಲ್ಲಿ ತನ್ನ ವೃತ್ತಿಬದುಕು ವಿಸ್ತರಿಸುವ ಗುರಿ ಹೊಂದಿದ್ದಾಗಿ ಹೇಳಿದ್ದಾರೆ.
ಈ ಸುದ್ದಿಯನ್ನು ಖಚಿತಪಡಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ, ನಾವು ಅವರ ನಿರ್ಧಾರವನ್ನು ಒಪ್ಪುತ್ತೇವೆ.ಮುಂಬರುವ ದಿನಗಳಲ್ಲಿ ನಮ್ಮ ಸೀಮಿತ ಓವರ್ ಕ್ರಿಕೆಟ್ ನಲ್ಲಿ ಅವರು ಪ್ರಮುಖ ಪಾತ್ರವಹಿಸುವ ವಿಶ್ವಾಸವಿದೆ ಎಂದಿದೆ.
ಹಸರಂಗ 2020ರಲ್ಲಿ ಸೆಂಚೂರಿಯನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆ ನಂತರ ಕೇವಲ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದರು.
ಲೆಗ್ ಸ್ಪಿನ್ನರ್ ಆಡಿರುವ 4 ಟೆಸ್ಟ್ ಗಳಲ್ಲಿ 4 ವಿಕೆಟ್ ಗಳನ್ನು ಪಡೆದಿದ್ದರು. 2021ರಲ್ಲಿ ಪಲ್ಲೆಕಲೆಯಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು.
ಏಕದಿನ ಹಾಗೂ ಟ್ವೆಂಟಿ-20 ಮಾದರಿ ಕ್ರಿಕೆಟ್ ನಲ್ಲಿ ಹಸರಂಗ ಶ್ರೀಲಂಕಾದ ಪ್ರಮುಖ ಬೌಲರ್ ಹಾಗೂ ಕೆಳ ಕ್ರಮಾಂಕದ ಬ್ಯಾಟರ್ ಆಗಿ ಮುಂದುವರಿಯಲಿದ್ದಾರೆ. 48 ಏಕದಿನ ಪಂದ್ಯಗಳಲ್ಲಿ ಹಸರಂಗ 67 ವಿಕೆಟ್ಗಳು ಹಾಗೂ 4 ಅರ್ಧಶತಕಗಳ ಸಹಿತ ಒಟ್ಟು 832 ರನ್ ಗಳಿಸಿದ್ದಾರೆ.
ಹಸರಂಗ 58 ಟಿ-20 ಪಂದ್ಯಗಳಲ್ಲಿ 91 ವಿಕೆಟ್ ಗಳು ಹಾಗೂ ಒಂದು ಅರ್ಧಶತಕ ಸಹಿತ ಒಟ್ಟು 533 ರನ್ ಗಳಿಸಿದ್ದಾರೆ.
ವಿಶ್ವದ ಹಲವು ಟಿ-20 ಲೀಗ್ ಗಳಲ್ಲಿ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.