ಶ್ರೀರಾಮ್ ಬಾಲಾಜಿ-ವಿಕ್ಟರ್ ಕಾರ್ನಿಯಾ ಶುಭಾರಂಭ

ಬಾಲಾಜಿ-ವಿಕ್ಟರ್ ಕಾರ್ನಿಯಾ | Photo: X \ @Sportskeeda
ಮೆಲ್ಬರ್ನ್: ಭಾರತದ ಎನ್. ಶ್ರೀರಾಮ್ ಬಾಲಾಜಿ ರೋಮಾನಿಯದ ವಿಕ್ಟರ್ ಕಾರ್ನಿಯಾ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ತಲುಪಿದ್ದಾರೆ.
ಈ ಜೋಡಿ ಮೊದಲ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇಟಲಿಯ ಜೋಡಿ ಮ್ಯಾಟಿಯೊ ಅರ್ನಾಲ್ಡಿ ಹಾಗೂ ಆಂಡ್ರಿಯಾ ಪೆಲ್ಲೆಗ್ರಿನೊರನ್ನು 6-3, 6-4 ನೇರ ಸೆಟ್ ಗಳ ಅಂತರದಿಂದ ಸೋಲಿಸಿದ್ದಾರೆ.
ಎಟಿಪಿ ಡಬಲ್ಸ್ ರ್ಯಾಂಕಿಂಗ್ನಲ್ಲಿ ಕ್ರಮವಾಗಿ 79ನೇ ಹಾಗೂ 69ನೇ ರ್ಯಾಂಕಿನಲ್ಲಿರುವ ಬಾಲಾಜಿ ಹಾಗೂ ಕಾರ್ನಿಯಾ ಮುಂದಿನ ಸುತ್ತಿನಲ್ಲಿ ಕ್ರೊಯೇಶಿಯದ 10ನೇ ಶ್ರೇಯಾಂಕದ ಮಾರ್ಸೆಲೊ ಅರೆವಾಲೊ ಹಾಗೂ ಮ್ಯಾಟ್ ಪಾವಿಕ್ರನ್ನು ಎದುರಿಸಲಿದ್ದಾರೆ.
ಬಾಲಾಜಿ ಆಸ್ಟ್ರೇಲಿಯನ್ ಓಪನ್ನ ಪುರುಷರ ಡಬಲ್ಸ್ ವಿಭಾಗದಲ್ಲಿ ಎರಡನೇ ಬಾರಿ ದ್ವಿತೀಯ ಸುತ್ತಿಗೆ ತಲುಪಿದ್ದಾರೆ. ಕಳೆದ ವರ್ಷ ಭಾರತದ ಜೀವನ್ ಜೊತೆಗೂಡಿ ಮೊದಲ ಬಾರಿ ಈ ಸಾಧನೆ ಮಾಡಿದ್ದರು. ಒಟ್ಟಾರೆ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಬಾಲಾಜಿ ಮೂರನೇ ಬಾರಿ ಎರಡನೇ ಸುತ್ತು ತಲುಪಿದ್ದಾರೆ. 2018ರಲ್ಲಿ ವಿಷ್ಣು ವರ್ಧನ್ ಜೊತೆ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ 2ನೇ ಸುತ್ತು ಪ್ರವೇಶಿಸಿದ್ದರು.





