ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿದ ನಿಕೊಲಸ್ ಪೂರನ್

ನಿಕೊಲಸ್ ಪೂರನ್ (Photo credit: icc-cricket.com)
ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ತಾರಾ ಬ್ಯಾಟರ್ ನಿಕೊಲಸ್ ಪೂರನ್, ತಮ್ಮ 29ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಆದರೆ, ತಮ್ಮ ಈ ನಿವೃತ್ತಿ ನಿರ್ಧಾರಕ್ಕೆ ಯಾವುದೇ ಕಾರಣಗಳನ್ನು ನೀಡದ ಅವರು, “ತುಂಬಾ ಯೋಚಿಸಿ ಹಾಗೂ ಆತ್ಮಾವಲೋಕನ ಮಾಡಿಕೊಂಡ ನಂತರ, ಈ ನಿರ್ಧಾರ ಕೈಗೊಂಡಿದ್ದೇನೆ” ಎಂದು ಒತ್ತಿ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ವಿರುದ್ಧದ ಮುಂಬರುವ ಟಿ-20 ಸರಣಿಯಿಂದ ಹೊರಗುಳಿಯುವ ನಿರ್ಧಾರ ಕೈಗೊಂಡ ಬೆನ್ನಿಗೇ, ಅವರಿಂದ ಈ ನಿರ್ಧಾರ ಹೊರ ಬಿದ್ದಿದೆ.
ಸ್ಫೋಟಕ ಎಡಗೈ ಬ್ಯಾಟರ್ ಆದ ನಿಕೊಲಸ್ ಪೂರನ್, ಟಿ-20 ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಪ್ರತಿನಿಧಿಸಿದ ಹಾಗೂ ವೆಸ್ಟ್ ಇಂಡೀಸ್ ತಂಡದ ಪರವಾಗಿ ಟಿ-20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 106 ಟಿ-20 ಪಂದ್ಯಗಳನ್ನಾಡಿರುವ ಅವರು, 26.14 ರನ್ ಸರಾಸರಿ ಹಾಗೂ 136.39 ಸ್ಟ್ರೈಕ್ ಸರಾಸರಿಯೊಂದಿಗೆ ಒಟ್ಟು 2275 ರನ್ ಗಳಿಸಿದ್ದಾರೆ. 61 ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನೂ ಆಡಿರುವ ಅವರು, 39.66 ರನ್ ಸರಾಸರಿ ಹಾಗೂ 99.15 ಸ್ಟ್ರೈಕ್ ಸರಾಸರಿಯೊಂದಿಗೆ ಒಟ್ಟು 1,983 ರನ್ ಕಲೆ ಹಾಕಿದ್ದಾರೆ.
ತಮ್ಮ ನಿವೃತ್ತಿಯ ಕುರಿತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನಿಕೊಲಾಸ್ ಪೂರನ್, “ತುಂಬಾ ಯೋಚಿಸಿ ಹಾಗೂ ಆತ್ಮಾವಲೋಕನ ಮಾಡಿಕೊಂಡ ನಂತರ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವ ನಿರ್ಧಾರ ಕೈಗೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
“ನಾವು ಪ್ರೀತಿಸುವ ಈ ಆಟವು ಅಪರಿಮಿತ ಸಂತೋಷ, ಉದ್ದೇಶ ಹಾಗೂ ಅವಿಸ್ಮರಣೀಯ ನೆನಪುಗಳು ಹಾಗೂ ವೆಸ್ಟ್ ಇಂಡೀಸ್ ಜನರನ್ನು ಪ್ರತಿನಿಧಿಸುವ ಅವಕಾಶ ನೀಡುವುದನ್ನು ಮುಂದುವರಿಸಲಿದೆ” ಎಂದೂ ಅವರು ಹೇಳಿದ್ದಾರೆ. ಟ್ರಿನಿಡಾಡ್ ನ ಸ್ಫೋಟಕ ಬ್ಯಾಟರ್ ಆದ ನಿಕೊಲಾಸ್ ಪೂರನ್, 2016ರಲ್ಲಿ ಟಿ-20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ, ಅವರೆಂದೂ ತಮ್ಮ ದೇಶದ ಪರ ಟೆಸ್ಟ್ ಪಂದ್ಯ ಆಡಿಲ್ಲ.
ಇತ್ತೀಚೆಗೆ ಭಾರತದಲ್ಲಿ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಋತುವಿನಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ನಿಕೊಲಸ್ ಪೂರನ್, ಇಂಗ್ಲೆಂಡ್ ತಂಡದ ವಿರುದ್ಧದ ಮುಂಬರುವ ಟಿ-20 ಸರಣಿಯಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು.