ಡಾನ್ ಬ್ರಾಡ್ಮನ್ ದಾಖಲೆ ಹಿಂದಿಕ್ಕಿದ ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್ | Photo Credit : PTI
ಸಿಡ್ನಿ, ಜ.6: ಇಂಗ್ಲೆಂಡ್ ತಂಡದ ವಿರುದ್ಧ ಗರಿಷ್ಠ ರನ್ ಕಲೆ ಹಾಕಿದ ಸ್ಟೀವ್ ಸ್ಮಿತ್ ಲೆಜೆಂಡರಿ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಮುರಿದು ಕ್ರಿಕೆಟ್ ದಾಖಲೆಯ ಪುಸ್ತಕಕ್ಕೆ ಸೇರ್ಪಡೆಯಾದರು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಐದನೇ ಹಾಗೂ ಅಂತಿಮ ಆ್ಯಶಸ್ ಟೆಸ್ಟ್ ಪಂದ್ಯದ ಮೂರನೇ ದಿನವಾದ ಮಂಗಳವಾರ ತನ್ನ 37ನೇ ಟೆಸ್ಟ್ ಶತಕವನ್ನು ಸಿಡಿಸಿರುವ ಆಸ್ಟ್ರೇಲಿಯದ ಬ್ಯಾಟರ್ ಸ್ಮಿತ್ ಒಂದೇ ಎದುರಾಳಿಯ ವಿರುದ್ಧ ಗರಿಷ್ಠ ರನ್ ಗಳಿಸಿ ಭಾರತದ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರಿದ್ದ ಪಟ್ಟಿಗೆ ಸೇರಿದರು.
ಆಸ್ಟ್ರೇಲಿಯ ತಂಡದ ಹಂಗಾಮಿ ನಾಯಕ ಸ್ಮಿತ್ ಇದೀಗ ಇಂಗ್ಲೆಂಡ್ ತಂಡದ ವಿರುದ್ದ ಒಟ್ಟು 5,085 ರನ್ ಗಳಿಸಿದ್ದಾರೆ. ಒಂದೇ ಎದುರಾಳಿಯ ವಿರುದ್ಧ 5,028 ರನ್ ಗಳಿಸಿದ್ದ ಬ್ರಾಡ್ಮನ್ ದಾಖಲೆಯನ್ನು ಮುರಿದರು.
ಒಂದೇ ಎದುರಾಳಿಯ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಸ್ಮಿತ್ಗಿಂತ ತೆಂಡುಲ್ಕರ್(6,707 ರನ್, ಆಸ್ಟ್ರೇಲಿಯದ ವಿರುದ್ಧ) ಹಾಗೂ ಕೊಹ್ಲಿ(ಆಸ್ಟ್ರೇಲಿಯ ವಿರುದ್ಧ 5,551 ರನ್) ಮುಂದಿದ್ದಾರೆ.
ಸ್ಮಿತ್ ಆ್ಯಶಸ್ ಸರಣಿಯಲ್ಲಿ 13ನೇ ಶತಕ ದಾಖಲಿಸಿದರು. 19 ಶತಕಗಳನ್ನು ಸಿಡಿಸಿರುವ ಬ್ರಾಡ್ಮನ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸ್ಮಿತ್ ಅವರು ಇದೀಗ 72.05ರ ಸರಾಸರಿಯಲ್ಲಿ ಐದು ಶತಕಗಳ ಸಹಿತ 1,225 ರನ್ ಗಳಿಸಿದ್ದಾರೆ.
‘‘ಎಸ್ಸಿಜಿ ಪಿಚ್ ನನ್ನ ಆಟಕ್ಕೆ ಸೂಕ್ತವಾಗಿದೆ. ಅಗ್ರ ಸರದಿಯಲ್ಲಿ ಟ್ರಾವಿಸ್ ಹೆಡ್ ಉತ್ತಮ ಪ್ರದರ್ಶನ ನೀಡಿದ್ದಾರೆ. ನನ್ನ ತವರು ಮೈದಾನದಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿ ಶತಕ ಗಳಿಸುವುದು ವಿಶೇಷ ಅನುಭವ’’ಎಂದು ಸ್ಮಿತ್ ಹೇಳಿದ್ದಾರೆ.
►ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎದುರಾಳಿಯ ವಿರುದ್ಧ ಗರಿಷ್ಠ ರನ್
6,707-ಆಸ್ಟ್ರೇಲಿಯ ವಿರುದ್ಧ ಸಚಿನ್ ತೆಂಡುಲ್ಕರ್
5,551-ಆಸ್ಟ್ರೇಲಿಯ ವಿರುದ್ಧ ವಿರಾಟ್ ಕೊಹ್ಲಿ
5,108-ಶ್ರೀಲಂಕಾ ವಿರುದ್ಧ ಸಚಿನ್ ತೆಂಡುಲ್ಕರ್
5,085-ಇಂಗ್ಲೆಂಡ್ ವಿರುದ್ಧ ಸ್ಟೀವನ್ ಸ್ಮಿತ್
5,028-ಇಂಗ್ಲೆಂಡ್ ವಿರುದ್ಧ ಡಾನ್ ಬ್ರಾಡ್ಮನ್
*ಆ್ಯಶಸ್ ಸರಣಿಯಲ್ಲಿ ಗರಿಷ್ಠ ಶತಕಗಳು
19-ಡಾನ್ ಬ್ರಾಡ್ಮನ್
13-ಸ್ಟೀವನ್ ಸ್ಮಿತ್
12-ಜಾಕ್ ಹೊಬ್ಸ್
10 -ಸ್ಟೀವ್ ವಾ
9-ಹ್ಯಾಮ್ಮಂಡ್
9-ಡೇವಿಸ್ ಗೋವರ್
►ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಶತಕವೀರರು
51-ಸಚಿನ್ ತೆಂಡುಲ್ಕರ್
45-ಜಾಕಸ್ ಕಾಲಿಸ್
41-ರಿಕಿ ಪಾಂಟಿಂಗ್
41-ಜೋ ರೂಟ್
38-ಕುಮಾರ ಸಂಗಕ್ಕರ
37-ಸ್ಟೀವನ್ ಸ್ಮಿತ್
36-ರಾಹುಲ್ ದ್ರಾವಿಡ್







