ಸುಲ್ತಾನ್ ಅಝ್ಲಾನ್ ಶಾ ಹಾಕಿ ಕಪ್: ಕೆನಡಾ ವಿರುದ್ಧ ಭರ್ಜರಿ ಜಯ, ಭಾರತ ಫೈನಲ್ಗೆ

Photo Credit : PTI
ಇಪೋಹ್(ಮಲೇಶ್ಯ), ನ.29: 2025ರ ಆವೃತ್ತಿಯ ಸುಲ್ತಾನ್ ಅಝ್ಲಾನ್ ಶಾ ಹಾಕಿ ಕಪ್ ಟೂರ್ನಿಯಲ್ಲಿ ತನ್ನ ಕೊನೆಯ ರೌಂಡ್ ರಾಬಿನ್ ಪಂದ್ಯದಲ್ಲಿ ಕೆನಡಾ ತಂಡವನ್ನು 14-3 ಗೋಲುಗಳ ಅಂತರದಿಂದ ಹೀನಾಯವಾಗಿ ಸೋಲಿಸಿದ ಭಾರತದ ಪುರುಷರ ಹಾಕಿ ತಂಡವು ಫೈನಲ್ಗೆ ಪ್ರವೇಶಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಡಿಫೆಂಡರ್ ಜುಗ್ರಾಜ್ ಸಿಂಗ್ ನಾಲ್ಕು ಗೋಲುಗಳನ್ನು ಗಳಿಸುವ ಮೂಲಕ ಭಾರತದ ಭರ್ಜರಿ ಗೆಲುವಿಗೆ ನೆರವಾದರು. ಜುಗ್ರಾಜ್ ಮೂರು ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದರು. ಒಂದು ಗೋಲನ್ನು ಪೆನಾಲ್ಟಿ ಸ್ಟ್ರೋಕ್ನಲ್ಲಿ ಗಳಿಸಿದರು.
ಅಭಿಷೇಕ್, ಅಮಿತ್ ರೋಹಿದಾಸ್ ಹಾಗೂ ರಾಜಿಂದರ್ ಸಿಂಗ್ ತಲಾ ಎರಡು ಗೋಲುಗಳನ್ನು ಗಳಿಸಿದರು. ಸೆಲ್ವಂ ಕಾರ್ತಿ, ನೀಲಕಂಠ ಶರ್ಮಾ, ಸಂಜಯ್ ಹಾಗೂ ದಿಲ್ಪ್ರೀತ್ ಸಿಂಗ್ ತಲಾ ಒಂದು ಗೋಲು ದಾಖಲಿಸಿದರು.
ಈ ಫಲಿತಾಂಶದ ಮೂಲಕ ಭಾರತ ತಂಡವು ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಿತು.
ನೀಲಕಂಠ ಶರ್ಮಾ ನಾಲ್ಕನೇ ನಿಮಿಷದಲ್ಲಿ ಭಾರತದ ಗೋಲಿನ ಖಾತೆ ತೆರೆದರು. ರಾಜಿಂದರ್ ಸಿಂಗ್ 10ನೇ ನಿಮಿಷದಲ್ಲಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು. 11ನೇ ನಿಮಿಷದಲ್ಲಿ ಕೆನಡಾ ತಂಡದ ಬ್ರೆಂಡನ್ ಗುರಾಲಿಯುಕ್ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದರು.
ಜುಗ್ರಾಜ್ ಸಿಂಗ್ ಹಾಗೂ ಅಮಿತ್ ರೋಹಿದಾಸ್ ಕ್ರಮವಾಗಿ 12ನೇ ಹಾಗೂ 15ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 4-1ಕ್ಕೆ ವಿಸ್ತರಿಸಿದರು.
ರಾಜಿಂದರ್ ಸಿಂಗ್ 24ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು. ದಿಲ್ಪ್ರೀತ್ ಸಿಂಗ್ 25ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಜುಗ್ರಾಜ್ 26ನೇ ನಿಮಿಷದಲ್ಲಿ ತನ್ನ ಎರಡನೇ ಗೋಲು ಸಿಡಿಸಿದರು.
ಕೆನಡಾ ತಂಡ 35ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ನಲ್ಲಿ ಗೋಲು ಹೊಡೆಯಿತು. ಜುಗ್ರಾಜ್ ಸಿಂಗ್ 39ನೇ ನಿಮಿಷದಲ್ಲಿ ತನ್ನ ಹ್ಯಾಟ್ರಿಕ್ ಗೋಲು ಪೂರೈಸಿದರು. ಸೆಲ್ವಂ ಕಾರ್ತಿ 43ನೇ ನಿಮಿಷದಲ್ಲಿ ಗೋಲು ಗಳಿಸುವುದರೊಂದಿಗೆ ಭಾರತದ ಮುನ್ನಡೆಯನ್ನು 9-2ಕ್ಕೆ ಹೆಚ್ಚಿಸಿದರು.
ಕೊನೆಯ ಅವಧಿಯ ಪಂದ್ಯದಲ್ಲಿ ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿದ್ದು, ಆರು ಗೋಲುಗಳು ದಾಖಲಾದವು. ಅಮಿತ್ ರೋಹಿದಾಸ್ 46ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ನ್ನು ಗೋಲಾಗಿ ಪರಿವರ್ತಿಸಿದರು. 50ನೇ ನಿಮಿಷದಲ್ಲಿ ಜುಗ್ರಾಜ್ ಗೋಲು ಗಳಿಸಿದರು. 56ನೇ ನಿಮಿಷದಲ್ಲಿ ಸಂಜಯ್ ಪೆನಾಲ್ಟಿ ಸ್ಟ್ರೋಕ್ನಲ್ಲಿ ಗೋಲು ಹೊಡೆದರು.
ಅಭಿಷೇಕ್ 57ನೇ ಹಾಗೂ 59ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ 14-3 ಅಂತರದ ಭರ್ಜರಿ ಗೆಲುವು ತಂದುಕೊಟ್ಟರು.
ಕ್ರೆಗ್-ಫುಲ್ಟನ್ರಿಂದ ತರಬೇತಿ ಪಡೆಯುತ್ತಿರುವ ಭಾರತ ಹಾಕಿ ತಂಡವು ಫೈನಲ್ನಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಭಾರತ ತಂಡವು ರೌಂಡ್-ರಾಬಿನ್ ಹಂತದಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಒಂದು ಗೋಲಿನ ಅಂತರದಿಂದ ಸೋತಿತ್ತು.
ಶನಿವಾರ ನಡೆದ ಮತ್ತೊಂದು ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 5-1 ಗೋಲುಗಳ ಅಂತರದಿಂದ ಮಣಿಸಿರುವ ಬೆಲ್ಜಿಯಂ ತಂಡವು ನಾಲ್ಕು ಗೆಲುವು ಹಾಗೂ ಒಂದರಲ್ಲಿ ಡ್ರಾ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.







