ರೋಸಾರಿಯೊ ಚಾಲೆಂಜರ್: ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ ಸುಮಿತ್ ನಾಗಲ್

ಸುಮಿತ್ ನಾಗಲ್ | PTI
ಹೊಸದಿಲ್ಲಿ: ಭಾರತದ ಟೆನಿಸ್ ಆಟಗಾರ ಸುಮಿತ್ ನಾಗಲ್ 2025ರ ಆವೃತ್ತಿಯ ರೋಸಾರಿಯೊ ಚಾಲೆಂಜರ್ ಟೂರ್ನಿಯಲ್ಲಿ ಅರ್ಜೆಂಟೀನದ ರೆಂರೊ ಒಲಿವೊರನ್ನು ಮಣಿಸುವ ಮೂಲಕ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಪಂದ್ಯಾವಳಿಯಲ್ಲಿ 8ನೇ ಶ್ರೇಯಾಂಕ ಪಡೆದಿರುವ ನಾಗಲ್ 5-7, 6-1,6-0 ಸೆಟ್ಗಳ ಅಂತರದಿಂದ ಜಯಶಾಲಿಯಾದರು. ಭಾರತದ 27ರ ಹರೆಯದ ಆಟಗಾರನ ಪಾಲಿಗೆ ಇದು ಮಹತ್ವದ ಸಾಧನೆಯಾಗಿದ್ದು, ಆರಂಭಿಕ ಸೆಟ್ನಲ್ಲಿ ಸೋತ ನಂತರ ಪುಟಿದೆದ್ದಿರುವುದು ಅವರ ಸಾಮರ್ಥ್ಯವನ್ನು ತೋರಿಸುತ್ತಿದೆ.
ನಾಗಲ್ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಸೆಂಗ್ ಚುನ್-ಸಿನ್ ಅಥವಾ ಬೊಲಿವಿಯಾದ ಹುಗೊ ಡೆಲ್ಲಿಯೆನ್ರನ್ನು ಎದುರಿಸಲಿದ್ದಾರೆ.
ನಿರ್ಣಾಯಕ ಸಮಯದಲ್ಲಿ ನಾಗಲ್ ಈ ಗೆಲುವು ದಾಖಲಿಸಿದರು. ಇತ್ತೀಚೆಗೆ ಅವರು ವೃತ್ತಿಪರ ರ್ಯಾಂಕಿಂಗ್ನಲ್ಲಿ ಕುಸಿತ ಕಂಡಿದ್ದರು. ಈ ಟೂರ್ನಿಗಿಂತ ಮೊದಲು ಎಟಿಪಿ ಟಾಪ್-100 ರ್ಯಾಂಕಿಂಗ್ನಿಂದ ಹೊರಗುಳಿದಿದ್ದರು. 2024ರ ಮಾರ್ಚ್ನಿಂದ ಸತತ 10 ತಿಂಗಳ ಕಾಲ ಅವರು ಟಾಪ್-100ರೊಳಗೆ ತನ್ನ ಸ್ಥಾನ ಕಾಯ್ದುಕೊಂಡಿದ್ದರು.
ನಾಗಲ್ 2024ರ ವಿಂಬಲ್ಡನ್ ಚಾಂಪಿಯನ್ಶಿಪ್ ನಂತರ 18 ಪಂದ್ಯಾವಳಿಗಳಲ್ಲಿ ಕೇವಲ ಮೂರು ಪ್ರಮುಖ ಡ್ರಾನಲ್ಲಿ ಜಯಶಾಲಿಯಾಗಿದ್ದರು.