ಬೆಂಗಳೂರು ಎಫ್ಸಿಯೊಂದಿಗೆ ಒಪ್ಪಂದ ಮುಂದುವರಿಸಿದ ಸುನೀಲ್ ಚೆಟ್ರಿ

Photo: PTI
ಹೊಸದಿಲ್ಲಿ, ಜು.3: ಭಾರತದ ಫುಟ್ಬಾಲ್ ಲೆಜೆಂಡ್ ಸುನೀಲ್ ಚೆಟ್ರಿ ಸರಿಯಾಗಿ ಇನ್ನೆರಡು ತಿಂಗಳಲ್ಲಿ 39ನೇ ವರ್ಷಕ್ಕೆ ಕಾಲಿಡಲಿದ್ದು, ಬೆಂಗಳೂರು ಎಫ್ಸಿಯೊಂದಿಗೆ ಹೊಸತಾಗಿ ಒಂದು ವರ್ಷದ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಒಪ್ಪಂದವು ಹೆಚ್ಚುವರಿ ವರ್ಷಕ್ಕೆ ನಿಬಂಧನೆಯನ್ನು ಒಳಗೊಂಡಿದೆ. ಕ್ಲಬ್ನೊಂದಿಗೆ ತನ್ನ ಒಡನಾಟವನ್ನು ವಿಸ್ತರಿಸುವ ಆಯ್ಕೆಯನ್ನು ಚೆಟ್ರಿಗೆ ನೀಡುತ್ತದೆ.
ವಿಶ್ವದ ಸಕ್ರಿಯ ಫುಟ್ಬಾಲ್ ಆಟಗಾರರ ಪೈಕಿ ಮೂರನೇ ಅತ್ಯಂತ ಹೆಚ್ಚು ಗೋಲು ಗಳಿಸಿದ ಸಾಧನೆ ಮಾಡಿರುವ ಚೆಟ್ರಿ ಶನಿವಾರ ನಡೆದ ಸ್ಯಾಫ್ ಚಾಂಪಿಯನ್ಶಿಪ್ ಸೆಮಿ ಫೈನಲ್ನಲ್ಲಿ ಲೆಬನಾನ್ ವಿರುದ್ಧ ಭಾರತ ಜಯ ಸಾಧಿಸಿದ ನಂತರ ಕಂಠೀರವ ಕ್ರೀಡಾಂಗಣದಲ್ಲಿ ಹೆಮ್ಮೆಯಿಂದ ಬ್ಯಾನರ್ ಪ್ರದರ್ಶಿಸಿದ್ದರು.
ಬೆಂಗಳೂರು ಎಫ್ಸಿಯೊಂದಿಗೆ 7 ಟ್ರೋಫಿಗಳನ್ನು ಗೆದ್ದಿರುವ ಚೆಟ್ರಿ ಕ್ಲಬ್ನೊಂದಿಗೆ ತನ್ನ ಪ್ರಯಾಣವನ್ನು ಮುಂದುವರಿಸುವ ಬದ್ಧತೆಯನ್ನು ಬ್ಯಾನರ್ನಲ್ಲಿ ಘೋಷಿಸಿದ್ದರು.
ಬೆಂಗಳೂರು ಎಫ್ಸಿ 2013ರಲ್ಲಿ ಸ್ಥಾಪನೆಯಾದಾಗಲೇ ಚೆಟ್ರಿ ನಾಯಕನ ಸ್ಥಾನ ವಹಿಸಿಕೊಂಡಿದ್ದರು. ಬೆಂಗಳೂರು ಎಫ್ಸಿಯಲ್ಲಿ ದೀರ್ಘಕಾಲ ಆಡಿದ ಆಟಗಾರನಾಗಿದ್ದಾರೆ. 10 ವರ್ಷಗಳ ಕಾಲ ಕ್ಲಬ್ ಪರ ಆಡಿರುವ ಅವರು ತಂಡದ ಯಶಸ್ವಿ ಪಯಣದಲ್ಲಿ ಅವಿಭಾಜ್ಯ ಅಂಗವಾಗಿದ್ದಾರೆ.
ಬೆಂಗಳೂರು ಎಫ್ಸಿಯೊಂದಿಗೆ ಚೆಟ್ರಿ ಮಹತ್ವದ ಸಾಧನೆ ಮಾಡಿದ್ದಾರೆ. ಹಲವು ಪ್ರತಿಷ್ಠಿತ ಟೂರ್ನಮೆಂಟ್ಗಳಲ್ಲಿ ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದ್ದರು.
2014 ಹಾಗೂ 2016ರಲ್ಲಿ ಐ-ಲೀಗ್, 2015 ಹಾಗೂ 2016ರಲ್ಲಿ ಫೆಡರೇಶನ್ ಕಪ್, 2018ರಲ್ಲಿ ಸೂಪರ್ ಕಪ್, 2019ರಲ್ಲಿ ಇಂಡಿಯನ್ ಸೂಪರ್ ಲೀಗ್ ಹಾಗೂ ಇತ್ತೀಚೆಗೆ 2022ರಲ್ಲಿ ಡುರಾಂಡ್ ಕಪ್ ಜಯಿಸುವಲ್ಲಿ ಚೆಟ್ರಿ ನಿರ್ಣಾಯಕ ಪಾತ್ರವಹಿಸಿದ್ದರು.
ಚೆಟ್ರಿ ಅವರ ಅಮೋಘ ಪ್ರದರ್ಶನವು ಕ್ಲಬ್ನ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಭಾರತೀಯ ಫುಟ್ಬಾಲ್ನಲ್ಲಿ ಐಕಾನ್ ಆಟಗಾರನಾಗಿ ಪ್ರಸಿದ್ಧಿ ಪಡೆದಿದ್ದಾರೆ.
ಚೆಟ್ರಿ ಬೆಂಗಳೂರು ಎಫ್ಸಿ ಪರ ಎಲ್ಲ ಸ್ಪರ್ಧಾವಳಿಗಳಲ್ಲಿ 250ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದು, 116 ಗೋಲುಗಳನ್ನು ಗಳಿಸಿದ್ದಾರೆ. 7 ಬಾರಿ ಕ್ಲಬ್ನ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದ್ದರು.