ಕ್ಲಬ್ ತೊರೆದು ದೇಶದ ಪರವಾಗಿ ಆಡಲು ಮುಂದಾದ ಸುನೀಲ್ ಚೆಟ್ರಿ

ಸುನೀಲ್ ಚೆಟ್ರಿ (File Photo)
ಹೊಸದಿಲ್ಲಿ: ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಕ್ಲಬ್ ಫುಟ್ಬಾಲ್ನಿಂದ ಹೊರಬಂದು ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ಧಾವಿಸಿದ್ದಾರೆ.
ಚೀನಾದ ಹಾಂಗ್ಝೂನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುವ ಭಾರತೀಯ ಫುಟ್ಬಾಲ್ ತಂಡಕ್ಕೆ ಆಟಗಾರರನ್ನು ಬಿಟ್ಟುಕೊಡಲು ಕ್ಲಬ್ಗಳು ನಿರಾಕರಿಸಿವೆ. ಈ ಕ್ರೀಡಾಕೂಟಕ್ಕಾಗಿ ರಾಷ್ಟ್ರೀಯ ತಂಡಕ್ಕೆ ಅನುಭವಿ ಆಟಗಾರರನ್ನು ಪಡೆಯುವಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ವಿಫಲವಾಗಿದೆ.
ಆದರೆ, 39 ವರ್ಷದ ಚೆಟ್ರಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಲು ಧಾವಿಸಿದ್ದಾರೆ.
ಏಶ್ಯನ್ ಗೇಮ್ಸ್ಗಾಗಿ ಕಳೆದ ತಿಂಗಳು 22 ಸದಸ್ಯರ ತಂಡವನ್ನು ಫೆಡರೇಶನ್ ಘೋಷಿಸಿತ್ತು. ಆದರೆ, ಈ ಪೈಕಿ 13 ಆಟಗಾರರನ್ನು ಅವರ ಐಎಸ್ಎಲ್ ಕ್ಲಬ್ಗಳು ಬಿಡುಗಡೆಗೊಳಿಸಿಲ್ಲ. ಹಾಗಾಗಿ, ಎಐಎಫ್ಎಫ್ ಈಗ ಎರಡನೇ ದರ್ಜೆಯ 18 ಸದಸ್ಯರ ತಂಡವೊಂದನ್ನು ಆಯ್ಕೆ ಮಾಡಿದೆ. ಛೇತ್ರಿಯನ್ನು ಹೊರತುಪಡಿಸಿದರೆ, ಈ ತಂಡಲ್ಲಿರುವ ಹೆಚ್ಚಿನ ಆಟಗಾರರು ಅನನುಭವಿಗಳು.
“ಚೆಟ್ರಿ ಅತ್ಯಂತ ಪ್ರತಿಷ್ಠಿತ ಆಟಗಾರ. ಆದರೆ, ಈಗಿನ ಭಾರತೀಯ ತಂಡ ಪರಿಪೂರ್ಣ ತಂಡವಲ್ಲ. ಹೀಗಿದ್ದೂ, ದೇಶಕ್ಕಾಗಿ ಆಡಲು ಅವರು ಮುಂದೆ ಬಂದಿದ್ದಾರೆ. ಅವರಿಗೆ ಅಭಿನಂದನೆಗಳು’’ ಎಂದು ಎಐಎಫ್ಎಫ್ ಅಧಿಕಾರಿಯೊಬ್ಬರು ಪಿಟಿಐಯೊಂದಿಗೆ ಮಾತನಾಡುತ್ತಾ ಹೇಳಿದರು.







