ಡಿಎಲ್ಎಸ್ ನಿಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸುನೀಲ್ ಗವಾಸ್ಕರ್

ಸುನೀಲ್ ಗವಾಸ್ಕರ್ | PC : PTI
ಪರ್ತ್, ಅ. 20: ಮಳೆ ಬಾಧಿತ ಕ್ರಿಕೆಟ್ ಪಂದ್ಯಗಳಲ್ಲಿ ಬಳಸಲಾಗುವ ಡಿಎಲ್ಎಸ್ ನಿಯಮದ ವಿರುದ್ಧ ಭಾರತೀಯ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ಪರ್ತ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಈ ನಿಯಮವನ್ನು ಬಳಸಲಾಗಿತ್ತು. ಮಳೆಯಿಂದಾಗಿ ಪಂದ್ಯವನ್ನು ಪ್ರತಿ ತಂಡಕ್ಕೆ 26 ಓವರ್ಗಳಿಗೆ ಕಡಿತಗೊಳಿಸಲಾಯಿತು. ಕುತೂಹಲದ ವಿಚಾರವೆಂದರೆ, ಭಾರತವು 26 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 136 ರನ್ ಗಳಿಸಿದ ಬಳಿಕ, ಡಿಎಲ್ಎಸ್ ನಿಯಮದಂತೆ, ಆಸ್ಟ್ರೇಲಿಯದ ಗುರಿಯನ್ನು 131ಕ್ಕೆ ನಿಗದಿಪಡಿಸಲಾಯಿತು. ಇದನ್ನು ಆಸ್ಟ್ರೇಲಿಯವು ಕೇವಲ 21.1 ಓವರ್ಗಳಲ್ಲಿ ಸುಲಭವಾಗಿ ಬೆನ್ನತ್ತಿತು.
‘‘ಈ ನಿಯಮವು ಹೆಚ್ಚಿನವರಿಗೆ ಅರ್ಥ ಆಗಿದೆ ಎಂದು ನನಗನಿಸುವುದಿಲ್ಲ. ಆದರೆ, ಇದು ತುಂಬಾ ಸಮಯದಿಂದ ಚಾಲ್ತಿಯಲ್ಲಿದೆ. ಭಾರತೀಯರೊಬ್ಬರು ವಿಜೆಡಿ ನಿಯಮವನ್ನು ರೂಪಿಸಿದ್ದು, ಇದು ತುಂಬಾ ಉತ್ತಮವಾಗಿದೆ ಎಂದು ನನಗನಿಸುತ್ತದೆ. ಯಾಕೆಂದರೆ ಅದು ಉಭಯ ತಂಡಗಳಿಗೂ ಸಮಾನ ಅವಕಾಶವನ್ನು ನೀಡುತ್ತದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ದೇಶಿ ಕ್ರಿಕೆಟ್ನಲ್ಲಿ ವಿಜೆಡಿ ನಿಯಮವನ್ನು ಉಪಯೋಗಿಸುತ್ತದೆ’’ ಎಂದು ‘ಇಂಡಿಯಾ ಟುಡೆ’ ಜೊತೆಗೆ ಮಾತನಾಡಿದ ಸುನೀಲ್ ಗವಾಸ್ಕರ್ ಹೇಳಿದರು.
‘‘ಇದರ ಬಗ್ಗೆ ಅವರು ಗಮನ ಹರಿಸಬೇಕಾಗಿದೆ. ಮಳೆಯಿಂದಾಗಿ ಪಂದ್ಯವು ಸ್ಥಗಿತಗೊಳ್ಳುವ ಸಂದರ್ಭಗಳಲ್ಲಿ, ನಿಗದಿಪಡಿಸಲಾಗಿರುವ ಗುರಿಯು ನ್ಯಾಯೋಚಿತವಾಗಿದೆ ಎಂಬುದಾಗಿ ಎರಡೂ ತಂಡಗಳು ಭಾವಿಸುವಂತೆ ನೋಡಿಕೊಳ್ಳಬೇಕಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.







