ವಿಂಡೀಸ್ ವಿರುದ್ಧ ನೆದರ್‌ಲ್ಯಾಂಡ್ಸ್‌ಗೆ ಸೂಪರ್ ಓವರ್ ಗೆಲುವು

ಹರಾರೆ: ಅತ್ಯಂತ ರೋಚಕವಾಗಿ ಸಾಗಿದ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯ 18ನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ವೆಸ್ಟ್ಇಂಡೀಸ್ ವಿರುದ್ಧ ಸೂಪರ್ ಓವರ್ನಲ್ಲಿ ‘ಸೂಪರ್’ ಗೆಲುವು ದಾಖಲಿಸಿದೆ.
ಸೋಮವಾರ ನಡೆದ ಗರಿಷ್ಠ ಮೊತ್ತದ ಹಣಾಹಣಿಯಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿ ಟೈ ಸಾಧಿಸಿದವು. ಆಗ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್ನಲ್ಲಿ ನೆದರ್ಲ್ಯಾಂಡ್ಸ್ ಬ್ಯಾಟರ್ ವ್ಯಾನ್ ಬೀಕ್, ಹೋಲ್ಡರ್ ಬೌಲಿಂಗ್ನಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 30 ರನ್ ಗಳಿಸಿದರು. ಗೆಲ್ಲಲು 31 ರನ್ ಗುರಿ ಬೆನ್ನಟ್ಟಿದ ವಿಂಡೀಸ್ 2 ವಿಕೆಟ್ ಕಳೆದುಕೊಂಡು 8 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ಇಂಡೀಸ್ ತಂಡ ಪೂರನ್(ಔಟಾಗದೆ 104 ರನ್), ಬ್ರೆಂಡನ್ ಕಿಂಗ್(76 ರನ್) ಹಾಗೂ ಜಾನ್ಸನ್ ಚಾರ್ಲ್ಸ್(54 ರನ್)ಅರ್ಧಶತಕಗಳ ನೆರವಿನಿಂದ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿತು. ಗೆಲ್ಲಲು 375 ರನ್ ಗುರಿ ಬೆನ್ನಟ್ಟಿದ್ದ ನೆದರ್ಲ್ಯಾಂಡ್ಸ್ ತಂಡ ತೇಜ(111 ರನ್, 76 ಎಸೆತ)ಶತಕ, ನಾಯಕ ಸ್ಕಾಟ್ ಎಡ್ವರ್ಡ್ಸ್(67 ರನ್, 47 ಎಸೆತ)ಅರ್ಧಶತಕದ ಸಹಾಯದಿಂದ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ವಿಂಡೀಸ್ ಪರ ರೋಸ್ಟನ್ ಚೇಸ್(3-73)ಯಶಸ್ವಿ ಪ್ರದರ್ಶನ ನೀಡಿದರು. ಜೋಸೆಫ್(2-73) ಹಾಗೂ ಅಕೀಲ್ ಹುಸೇನ್(2-73)ತಲಾ ಎರಡು ವಿಕೆಟ್ ಪಡೆದರು.