ದೃಷ್ಟಿದೋಷವಿರುವ ವ್ಯಕ್ತಿಗಳು ಜಿಲ್ಲಾ ನ್ಯಾಯಾಂಗದಲ್ಲಿ ನ್ಯಾಯಾಧೀಶ ಹುದ್ದೆಗೆ ಅರ್ಹರು: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಮಹತ್ವದ ತೀರ್ಪೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು,ದೈಹಿಕ ವೈಕಲ್ಯಗಳನ್ನು ಹೊಂದಿದ್ದಾರೆ ಎಂಬ ಏಕೈಕ ಕಾರಣದಿಂದ ಅಂತಹ ಅಭ್ಯರ್ಥಿಗಳಿಗೆ ನ್ಯಾಯಾಂಗ ಸೇವೆಯಲ್ಲಿ ನೇಮಕಾತಿಯನ್ನು ನಿರಾಕರಿಸುವಂತಿಲ್ಲ ಎಂದು ಸೋಮವಾರ ಎತ್ತಿ ಹಿಡಿದಿದೆ.
ಮಧ್ಯಪ್ರದೇಶದ ದೃಷ್ಟಿಹೀನ ಅಭ್ಯರ್ಥಿಯೋರ್ವನ ತಾಯಿ ಸಲ್ಲಿಸಿದ್ದ ಅರ್ಜಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಅಂತಹ ಅಭ್ಯರ್ಥಿಗಳಿಗೆ ನ್ಯಾಯಾಂಗ ಸೇವೆಯಲ್ಲಿ ಮೀಸಲಾತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಗುಚ್ಛದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು ಈ ತೀರ್ಪನ್ನು ಪ್ರಕಟಿಸಿದೆ.
ರಾಜ್ಯ ನ್ಯಾಯಾಂಗ ಸೇವೆಗಳಲ್ಲಿ ದೃಷ್ಟಿದೋಷವುಳ ಅಭ್ಯರ್ಥಿಗಳು ನೇಮಕಗೊಳ್ಳುವುದನ್ನು ತಡೆದಿದ್ದ ಮಧ್ಯಪ್ರದೇಶ ನ್ಯಾಯಾಂಗ ಸೇವೆಗಳ(ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಯನ್ನು ಪ್ರಶ್ನಿಸಿ ಆ ರಾಜ್ಯದ ದೃಷ್ಟಿಹೀನ ಅಭ್ಯರ್ಥಿಯ ತಾಯಿ ಕಳೆದ ವರ್ಷ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವನ್ನು ಬರೆದಿದ್ದರು. ಪತ್ರವನ್ನು ಸ್ವೀಕರಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಅದನ್ನು ಸ್ವಯಂಪ್ರೇರಿತ ಅರ್ಜಿಯನ್ನಾಗಿ ಪರಿವರ್ತಿಸಿತ್ತು.
ದೃಷ್ಟಿದೋಷವುಳ್ಳ ಅಭ್ಯರ್ಥಿಗಳು ಜಿಲ್ಲಾ ನ್ಯಾಯಾಂಗದಲ್ಲಿ ನೇಮಕಗೊಳ್ಳುವುದನ್ನು ನಿಷೇಧಿಸಿದ್ದ ಮಧ್ಯಪ್ರದೇಶ ನಿಯಮಾವಳಿಯಲ್ಲಿನ ನಿಯಮ 6ಎ ಅನ್ನು ಪೀಠವು ರದ್ದುಗೊಳಿಸಿತು.
ಅಂಗ ವೈಕಲ್ಯಗಳನ್ನು ಹೊಂದಿರುವ ವ್ಯಕ್ತಿಗಳು ನ್ಯಾಯಾಂಗ ಸೇವೆಗಳಿಗೆ ನೇಮಕಾತಿಗಳಲ್ಲಿ ಯಾವುದೇ ತಾರತಮ್ಯವನ್ನು ಎದುರಿಸಬಾರದು ಮತ್ತು ಸರಕಾರವು ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಒದಗಿಸಲು ದೃಢವಾದ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಒತ್ತಿ ಹೇಳಿದೆ.







