ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಸುರತ್ಕಲ್ ನ ಧನಲಕ್ಷ್ಮೀ ಪೂಜಾರಿ ಆಯ್ಕೆ
ಮೂಡುಬಿದಿರೆ, ನ.11: ಸುರತ್ಕಲ್ ಇಡ್ಯಾ ನಿವಾಸಿ ಹಾಗೂ ಆಳ್ವಾಸ್ ಸ್ಪೋಟ್ಸ್9 ಕ್ಲಬ್ನ ಪ್ರತಿಭಾನ್ವಿತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರು ಭಾರತದ ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸುರತ್ಕಲ್ ಇಡ್ಯಾ ನಿವಾಸಿ ನಾರಾಯಣ ಪೂಜಾರಿ ಹಾಗೂ ಶಶಿಕಲಾ ದಂಪತಿಯ ಪುತ್ರಿಯಾಗಿರುವ ಧನಲಕ್ಷ್ಮೀ ನವೆಂಬರ್ 15ರಿಂದ 25ರವರೆಗೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಲಿರುವ 12 ದೇಶಗಳು ಭಾಗವಹಿಸಲಿರುವ ಎರಡನೇ ಆವೃತ್ತಿಯ ಮಹಿಳಾ ಕಬಡ್ಡಿ ವರ್ಲ್ಡ್ ಕಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಧನಲಕ್ಷ್ಮೀ ದಕ್ಷಿಣ ಭಾರತದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಏಕೈಕ ಕಬಡ್ಡಿ ಆಟಗಾರ್ತಿಯಾಗಿದ್ದಾರೆ. ತನ್ನ ಆಲ್ರೌಂಡರ್ ಆಟದಿಂದ ತಂಡದಲ್ಲಿ ಬಹು ಬೇಡಿಕೆಯ ಕ್ರೀಡಾಪಟುವಾಗಿದ್ದಾರೆ. ಧನಲಕ್ಷ್ಮೀ ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯೊಂದಿಗೆ ಡಿಪ್ಲೋಮಾ ಕೋರ್ಸ್ಗಳನ್ನು ಸಂಪೂರ್ಣ ಕ್ರೀಡಾ ದತ್ತು ಶಿಕ್ಷಣ ಯೋಜನೆಯಲ್ಲಿ ಉಚಿತವಾಗಿ ಪಡೆದಿದ್ದಾರೆ.
ಧನಲಕ್ಷ್ಮೀ ಜೂನಿಯರ್ ನ್ಯಾಶನಲ್, ಸೀನಿಯರ್ ನ್ಯಾಶನಲ್ ಹಾಗೂ ಫೆಡರೇಷನ್ ಕಪ್ನಲ್ಲಿ ಒಟ್ಟು 12 ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಈಗಾಗಲೇ ಸೀನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ 4 ಬಾರಿ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಭಾಗವಹಿಸಿರುತ್ತಾರೆ. ಪ್ರಸ್ತುತ ಗುಜರಾತಿನ ಗಾಂಧಿನಗರದಲ್ಲಿರುವ ಸಾಯ್ ಸೆಂಟರ್ನಲ್ಲಿ ಅಂತಿಮ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.







