ಐಸಿಸಿ T20 ರ್ಯಾಂಕಿಂಗ್ | 5 ಸ್ಥಾನ ಭಡ್ತಿ ಪಡೆದ ಸೂರ್ಯಕುಮಾರ್

ಸೂರ್ಯಕುಮಾರ್ ಯಾದವ್ | Photo Credit : PTI
ದುಬೈ, ಜ.28: ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ನ್ಯೂಝಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ–20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬಿಡುಗಡೆಯಾದ ಪುರುಷರ ಐಸಿಸಿ ಟಿ–20 ರ್ಯಾಂಕಿಂಗ್ನಲ್ಲಿ ಐದು ಸ್ಥಾನಗಳ ಭಡ್ತಿ ಪಡೆದು ಏಳನೇ ಸ್ಥಾನಕ್ಕೇರಿದ್ದಾರೆ.
ವಿಶ್ವದ ಮಾಜಿ ನಂ.1 ಬ್ಯಾಟರ್ ಸೂರ್ಯಕುಮಾರ್ ಟಿ–20 ಸರಣಿಯಲ್ಲಿ 32, ಔಟಾಗದೆ 82 ಹಾಗೂ ಔಟಾಗದೆ 57 ರನ್ಗಳನ್ನು ಗಳಿಸಿದ್ದರು. ಟಿ–20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಅವರು ಕ್ರಮವಾಗಿ ಮೊದಲನೇ ಹಾಗೂ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ರಾಯ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 32 ಎಸೆತಗಳಲ್ಲಿ 76 ರನ್ ಗಳಿಸಿದ್ದ ಇಶಾನ್ ಕಿಶನ್ 64ನೇ ಸ್ಥಾನಕ್ಕೇರಿದ್ದಾರೆ. ಶಿವಂ ದುಬೆ (9 ಸ್ಥಾನಗಳ ಭಡ್ತಿ, 58ನೇ ಸ್ಥಾನ) ಹಾಗೂ ರಿಂಕು ಸಿಂಗ್ (13 ಸ್ಥಾನಗಳ ಭಡ್ತಿ, 68ನೇ ಸ್ಥಾನ) ಕೂಡ ರ್ಯಾಂಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ.
ಟಿ–20 ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬುರ್ರಹ್ಮಾನ್ ಐದು ಸ್ಥಾನಗಳ ಭಡ್ತಿ ಪಡೆದು 9ನೇ ಸ್ಥಾನಕ್ಕೇರಿದ್ದಾರೆ. ಭಾರತದ ಜಸ್ಪ್ರೀತ್ ಬುಮ್ರಾ (4 ಸ್ಥಾನಗಳ ಭಡ್ತಿ, 13ನೇ ಸ್ಥಾನ) ಹಾಗೂ ರವಿ ಬಿಷ್ಣೋಯಿ (13 ಸ್ಥಾನಗಳ ಭಡ್ತಿ, 19ನೇ ಸ್ಥಾನ) ಕೂಡ ರ್ಯಾಂಕಿಂಗ್ನಲ್ಲಿ ಮೇಲೇರಿದ್ದಾರೆ.
ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದಿರುವ ಭಾರತದ ಹಾರ್ದಿಕ್ ಪಾಂಡ್ಯ 18 ಸ್ಥಾನಗಳ ಭಡ್ತಿ ಪಡೆದು 59ನೇ ಸ್ಥಾನ ತಲುಪಿದ್ದಾರೆ.







