ಕಳಪೆ ಫಾರ್ಮ್: ಸೂರ್ಯಕುಮಾರ್ T-20 ನಾಯಕತ್ವಕ್ಕೆ ಸಂಚಕಾರ?

ಸೂರ್ಯಕುಮಾರ್ ಯಾದವ್ |Photo Credit : PTI
ಹೊಸದಿಲ್ಲಿ: ಸದ್ಯ ನಡೆಯುತ್ತಿರುವ ಐಪಿಎಲ್ ಸೇರಿದಂತೆ ಎಲ್ಲ ಟಿ-20 ಪಂದ್ಯಗಳಲ್ಲಿ ಕಳಪೆ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದ ಗಾದಿಗೆ ಸಂಚಕಾರ ಬರುವ ಸಾಧ್ಯತೆಯಿದ್ದು, ಮುಂದಿನ ತಿಂಗಳು ಭಾರತ ತಂಡದ ಐರ್ಲ್ಯಾಂಡ್ ಪ್ರವಾಸದ ವೇಳೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಕಷ್ಟಕರವಾಗುವ ನಿರೀಕ್ಷೆ ಇದೆ.
ಗುವಾಹಟಿಯಲ್ಲಿ ಮೇ 19ರಂದು ನಡೆಯುವ ಸೀನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿಯ ಸಭೆಯಲ್ಲಿ ಭಾರತದ ಟಿ-20 ಕ್ರಿಕೆಟಿನ ಉತ್ತರಾಧಿಕಾರಿಯ ಕುರಿತು ಅಧಿಕೃತವಾಗಿ ಚರ್ಚೆ ನಡೆಸುವ ಯೋಜನೆ ಇದೆ ಎಂದು ‘ಸ್ಪೋರ್ಟ್ಸ್ಟಾರ್‘ವರದಿ ಮಾಡಿದೆ.
ಅಫ್ಘಾನಿಸ್ತಾನದ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕೆ ಟೆಸ್ಟ್ ತಂಡವನ್ನು ಆಯ್ಕೆ ಮಾಡಲು ಸಭೆಯನ್ನು ಆಯೋಜಿಸಲಾಗಿದೆ. ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ ತಂಡವು ಟಿ-20 ವಿಶ್ವಕಪ್ ಗೆದ್ದ ನಂತರ ಆಯ್ಕೆ ಸಮಿತಿಯ ಮೊದಲ ಸಭೆ ಇದಾಗಿದೆ.
ಸೂರ್ಯಕುಮಾರ್ ನಾಯಕನಾಗಿ 52 ಪಂದ್ಯಗಳನ್ನು ಆಡಿದ್ದು, 49 ಇನಿಂಗ್ಸ್ಗಳಲ್ಲಿ ಒಟ್ಟು 1,232 ರನ್ ಗಳಿಸಿದ್ದಾರೆ. ನಾಯಕತ್ವ ಇಲ್ಲದಾಗ 61 ಪಂದ್ಯಗಳಲ್ಲಿ 58 ಇನಿಂಗ್ಸ್ಗಳಲ್ಲಿ 3 ಶತಕ, 17 ಅರ್ಧಶತಗಳ ಸಹಿತ 2,040 ರನ್ ಗಳಿಸಿದ್ದಾರೆ.




