ಸಚಿನ್ ತೆಂಡುಲ್ಕರ್ ಐಪಿಎಲ್ ದಾಖಲೆ ಮುರಿದ ಸೂರ್ಯಕುಮಾರ್

ಸಚಿನ್ ತೆಂಡುಲ್ಕರ್ ,ಸೂರ್ಯಕುಮಾರ್ | PTI
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ(ಐಪಿಎಲ್)ಮೂರು ಆವೃತ್ತಿಗಳಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಏಕೈಕ ಬ್ಯಾಟರ್ ಆಗಿ ಹೊರಹೊಮ್ಮಿರುವ ಸೂರ್ಯಕುಮಾರ್ ಯಾದವ್ ಇತಿಹಾಸ ನಿರ್ಮಿಸಿದರು. ಈ ಮೂಲಕ ತಲಾ ಎರಡು ಬಾರಿ ಈ ಸಾಧನೆ ಮಾಡಿರುವ ಲೆಜೆಂಡ್ ಗಳಾದ ಸಚಿನ್ ತೆಂಡುಲ್ಕರ್ ಹಾಗೂ ಕ್ವಿಂಟನ್ ಡಿಕಾಕ್ ದಾಖಲೆಯನ್ನು ಮುರಿದಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ಬುಧವಾರ ವಾಂಖೆಡೆ ಸ್ಟೇಡಿಯಮ್ ನಲ್ಲಿ ನಡೆದಿದ್ದ ಐಪಿಎಲ್ ಪಂದ್ಯದ ವೇಳೆ ಸೂರ್ಯಕುಮಾರ್ ಈ ಮೈಲಿಗಲ್ಲು ತಲುಪಿದ್ದಾರೆ. ಈ ಪಂದ್ಯದಲ್ಲಿ 24 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 145.83ರ ಸ್ಟ್ರೈಕ್ ರೇಟ್ ನಲ್ಲಿ 35 ರನ್ ಗಳಿಸಿದರು.
ಸೂರ್ಯಕುಮಾರ್ ಈ ಋತುವಿನಲ್ಲಿ ಸತತ 12ನೇ ಬಾರಿ 25ಕ್ಕೂ ಅಧಿಕ ರನ್ ಗಳಿಸಿದರು.
12 ಪಂದ್ಯಗಳಲ್ಲಿ 63.75ರ ಸರಾಸರಿಯಲ್ಲಿ, 170ಕ್ಕೂ ಅಧಿಕ ಸ್ಟ್ರೈಕ್ ರೇಟ್ ನಲ್ಲಿ ಒಟ್ಟು 510 ರನ್ ಗಳಿಸಿರುವ ಸೂರ್ಯಕುಮಾರ್ 2025ರ ಆವೃತ್ತಿಯ ಐಪಿಎಲ್ ನ ಗರಿಷ್ಠ ಸ್ಕೋರರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸೂರ್ಯ ಈ ಋತುವಿನಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದು, ಔಟಾಗದೆ 67 ಗರಿಷ್ಠ ಸ್ಕೋರಾಗಿದೆ.
ಸೂರ್ಯ 2018ರಲ್ಲಿ ಮೊದಲ ಬಾರಿ 500 ರನ್ ಗಳಿಸಿದ್ದರು. ಆಗ ಅವರು 14 ಪಂದ್ಯಗಳಲ್ಲಿ 36.57ರ ಸರಾಸರಿಯಲ್ಲಿ 133ಕ್ಕೂ ಅಧಿಕ ಸ್ಟ್ರೈಕ್ ರೇಟ್ ನಲ್ಲಿ 512 ರನ್ ಗಳಿಸಿ ಮುಂಬೈ ಪರ ಟಾಪ್ ಸ್ಕೋರರ್ ಎನಿಸಿಕೊಂಡಿದ್ದರು.
2023ರಲ್ಲಿ 16 ಪಂದ್ಯಗಳಲ್ಲಿ 43.21ರ ಸರಾಸರಿಯಲ್ಲಿ 181+ ಸ್ಟ್ರೈಕ್ ರೇಟ್ ನಲ್ಲಿ 1 ಶತಕ ಹಾಗೂ 5 ಅರ್ಧಶತಕಗಳ ಸಹಿತ ಒಟ್ಟು 605 ರನ್ ಗಳಿಸಿದ್ದರು. ಔಟಾಗದೆ 103 ಟಾಪ್ ಸ್ಕೋರಾಗಿದೆ.
ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ಪರ ಎರಡು ಬಾರಿ 500 ರನ್ ಗಳಿಸಿದ್ದಾರೆ. 2010ರಲ್ಲಿ 15 ಇನಿಂಗ್ಸ್ ಗಳಲ್ಲಿ 47.53ರ ಸರಾಸರಿಯಲ್ಲಿ, 132ರ ಸ್ಟ್ರೈಕ್ ರೇಟ್ ನಲ್ಲಿ ಒಟ್ಟು 618 ರನ್ ಗಳಿಸಿದ್ದ ತೆಂಡುಲ್ಕರ್ ಆರೆಂಜ್ ಕ್ಯಾಪ್ ಗೆದ್ದಿದ್ದರು. 2011ರಲ್ಲಿ 16 ಇನಿಂಗ್ಸ್ ಗಳಲ್ಲಿ 42.53ರ ಸರಾಸರಿಯಲ್ಲಿ ಶತಕದ ಸಹಿತ ಒಟ್ಟು 553 ರನ್ ಗಳಿಸಿದ್ದರು.
ಕ್ವಿಂಟನ್ ಡಿಕಾಕ್ 2019 ಹಾಗೂ 2020ರಲ್ಲಿ ಸತತವಾಗಿ 500ಕ್ಕೂ ಅಧಿಕ ರನ್ ಕಲೆ ಹಾಕಿ ಸಚಿನ್ ಸಾಧನೆಯನ್ನು ಸರಿಗಟ್ಟಿದ್ದರು.
2019ರಲ್ಲಿ 35.26ರ ಸರಾಸರಿಯಲ್ಲಿ 132ರ ಸ್ಟ್ರೈಕ್ ರೇಟ್ ನಲ್ಲಿ ಒಟ್ಟು 529 ರನ್ ಗಳಿಸಿದ್ದರು. ಆ ನಂತರ 2020ರಲ್ಲಿ 35.92ರ ಸರಾಸರಿಯಲ್ಲಿ 140ಕ್ಕೂ ಅಧಿಕ ಸ್ಟ್ರೈಕ್ ರೇಟ್ ನಲ್ಲಿ 503 ರನ್ ಗಳಿಸಿದ್ದು, ಮುಂಬೈ ತಂಡವು ಸತತ ಪ್ರಶಸ್ತಿಗಳನ್ನು ಜಯಿಸುವಲ್ಲಿ ನೆರವಾಗಿದ್ದರು.