ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಕೈಕುಲುಕಿದ ಸೂರ್ಯಕುಮಾರ್

ಸೂರ್ಯಕುಮಾರ್ ಯಾದವ್ | PC : X
ದುಬೈ, ಸೆ.9: ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಂಗಳವಾರ 2025ರ ಏಶ್ಯ ಕಪ್ ಟೂರ್ನಿ ಗೆ ಮುಂಚಿತವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಿದ್ದರು. ಮಾಧ್ಯಮದಿಂದ ಪ್ರಶ್ನೆಗಳನ್ನು ಎದುರಿಸುವ ಮೊದಲು ಎಲ್ಲ 8 ತಂಡಗಳ ನಾಯಕರು ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಅಧ್ಯಕ್ಷ ಮುಹ್ಸಿನ್ ನಖ್ವಿ ಅವರ ಕೈಕುಲುಕಿದರು. ನಖ್ವಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಅಧ್ಯಕ್ಷರು ಹಾಗೂ ಪಾಕಿಸ್ತಾನದ ಸಚಿವರೂ ಆಗಿದ್ದಾರೆ.
ಸೂರ್ಯಕುಮಾರ್ ಅವರು ನಖ್ವಿ ಅವರ ಕೈಕುಲುಕುತ್ತಿರುವ ವೀಡಿಯೊ ತಕ್ಷಣವೇ ವೈರಲ್ ಆಗಿದೆ.
ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ, ಪಾಕಿಸ್ತಾನಿ ಪತ್ರಿಕೆ ‘ದ ಎಕ್ಸ್ ಪ್ರೆಸ್ ಟ್ರಿಬ್ಯೂನ್’ನೊಂದಿಗೆ ಮಾತನಾಡಿದ ನಖ್ವಿ, "ಪಾಕಿಸ್ತಾನದ ಆರ್ಥಿಕ ಸ್ಥಿರತೆಯನ್ನು ಭಾರತಕ್ಕೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅತಿ ದೊಡ್ಡ ಪ್ರಜಾಪ್ರಭುತ್ವದ ಎಂದು ಹೇಳಿಕೊಳ್ಳುವ ದೇಶವು ತನ್ನ ಉದ್ದೇಶವನ್ನು ಸಾಧಿಸಲು ಭಯೋತ್ಪಾದನೆಯನ್ನು ಹೇಗೆ ಬಳಸುತ್ತಿದೆ ಎಂಬುದನ್ನು ಜಗತ್ತು ನೋಡಬೇಕು’’ ಎಂದಿದ್ದರು.
ಏಶ್ಯ ಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ನಂತರ ಎಲ್ಲ 8 ತಂಡಗಳ ನಾಯಕರುಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಮಂಗಳವಾರ ಅಫ್ಘಾನಿಸ್ತಾನ ಹಾಗೂ ಹಾಂಕಾಂಗ್ ನಡುವಿನ ಪಂದ್ಯದ ಮೂಲಕ ಆರಂಭವಾಗಲಿರುವ ಏಶ್ಯ ಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ನಡೆಸಲಾಗುವುದು ಎಂದು ನಾಯಕರುಗಳು ವಿಶ್ವಾಸ ವ್ಯಕ್ತಪಡಿಸಿದರು.
‘‘ನಾವು ಜೂನ್ನಿಂದ ಒಟ್ಟಿಗೆ ಯಾವುದೇ ಪಂದ್ಯವನ್ನು ಆಡಿಲ್ಲ. ಒಂದು ತಂಡವಾಗಿ ನಾವು ಈ ಸವಾಲನ್ನು ಸ್ವೀಕರಿಸಬೇಕು. ಕಳೆದ 4 ದಿನಗಳಿಂದ ನಾವು ತಯಾರಿ ನಡೆಸುತ್ತಿದ್ದೇವೆ. ಇಲ್ಲಿನ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳುವ ವಿಶ್ವಾಸ ಹೊಂದಿದ್ದೇವೆ’’ ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಏಶ್ಯಕಪ್ ನಲ್ಲಿ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿರುವ ಸ್ಪರ್ಧೆಯೆಂದರೆ ಸೆ.14ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯಲಿರುವ ಲೀಗ್ ಪಂದ್ಯ. ಎರಡೂ ತಂಡಗಳು ಸ್ಪರ್ಧಾವಳಿಯಲ್ಲಿ 2 ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ.







