ಹೈದರಾಬಾದ್ ವಿರುದ್ಧ 60 ರನ್ ಗಳಿಸಿ ಪ್ರಬಲ ಸಂದೇಶ ರವಾನಿಸಿದ ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ | Photo Credit : x
ಕೋಲ್ಕತಾ: ಭಾರತದ ಟಿ-20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಕೇವಲ 21 ಎಸೆತಗಳಲ್ಲಿ ಔಟಾಗದೆ 60 ರನ್ ಗಳಿಸುವ ಮೂಲಕ 2026-27ರ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ತನ ಅಭಿಯಾನ ಆರಂಭಿಸಿದರು.
ಜಾಧವ್ಪುರ ಯುನಿವರ್ಸಿಟಿ ಕ್ಯಾಂಪಸ್ ಮೈದಾನದಲ್ಲಿ ಶನಿವಾರ ನಡೆದ ಎಲೈಟ್ ಡಿ ಗುಂಪಿನ ಪಂದ್ಯದಲ್ಲಿ ಮುಂಬೈ ತಂಡವು ಹೈದರಾಬಾದ್ ತಂಡವನ್ನು ಏಳು ವಿಕೆಟ್ಗಳ ಅಂತರದಿಂದ ಮಣಿಸಿದೆ.
ಗೆಲ್ಲಲು 173 ರನ್ ಗುರಿ ಪಡೆದಿದ್ದ ಮುಂಬೈ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ 21 ಎಸೆತಗಳಲ್ಲಿ ಆರು ಬೌಂಡರಿ, ಐದು ಸಿಕ್ಸರ್ಗಳ ಸಹಿತ 60 ರನ್ ಗಳಿಸಿದರು. ಮುಂಬೈ ತಂಡವು 13.1 ಓವರ್ಗಳಲ್ಲಿ ರನ್ ಚೇಸ್ ಮಾಡುವಲ್ಲಿ ನೆರವಾದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿರುವ ಸೂರ್ಯಕುಮಾರ್ ಮೂರನೇ ವಿಕೆಟ್ಗೆ ಮುಶೀರ್ ಖಾನ್ ಅವರೊಂದಿಗೆ 65 ರನ್ ಜೊತೆಯಾಟ ನಡೆಸಿದರು.
ಸರ್ಫರಾಝ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಕೂಡ ಅರ್ಧಶತಕವನ್ನು ಗಳಿಸಿ ಮುಂಬೈ ತಂಡ ಟೂರ್ನಿಯ ಮೊದಲ ಪಂದ್ಯ ಗೆಲ್ಲಲು ನೆರವಾದರು. ಮುಶೀರ್ 24 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ಸಹಿತ 51 ರನ್ ಗಳಿಸಿ 12ನೇ ಓವರ್ನಲ್ಲಿ ಅಜಯ್ ದೇವ್ಗೆ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮೊದಲು ಮುಶೀರ್ ಅವರು ವಿಕೆಟ್ಕೀಪರ್ ಹಾರ್ದಿಕ್ ತಾಮೋರೆ ಅವರೊಂದಿಗೆ ಎರಡನೇ ವಿಕೆಟ್ಗೆ 26 ಎಸೆತಗಳಲ್ಲಿ 49 ರನ್ ಜೊತೆಯಾಟ ನಡೆಸಿದರು.
ಶಿವಂ ದುಬೆ 14ನೇ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಮುಂಬೈ ತಂಡದ ರನ್ ಚೇಸ್ಗೆ ಅಂತ್ಯ ಹಾಡಿದರು. 5ನೇ ಕ್ರಮಾಂಕದಲ್ಲಿ ಆಡಿದ ದುಬೆ ಐದು ಎಸೆತಗಳಲ್ಲಿ ಔಟಾಗದೆ 13 ರನ್ ಗಳಿಸಿದ್ದಾರೆ.
ಮುಂಬೈ ತಂಡವು ಹೈದರಾಬಾದ್ ತಂಡವನ್ನು 20 ಓವರ್ಗಳಲ್ಲಿ 172 ರನ್ಗೆ ನಿಯಂತ್ರಿಸಿತು. ಮ್ಯಾಕ್ಸ್ವೆಲ್ ಸ್ವಾಮಿನಾಥನ್ ತನ್ನ 4 ಓವರ್ಗಳಲ್ಲಿ 23 ರನ್ಗೆ ಮೂರು ವಿಕೆಟ್ಗಳನ್ನು ಪಡೆದರು. ದುಬೆ ಹಾಗೂ ಸಾಯಿರಾಜ್ ಪಾಟೀಲ್ ತಲಾ ಎರಡು ವಿಕೆಟ್ಗಳನ್ನು ಪಡೆದರು.
ಹೈದರಾಬಾದ್ ಪರ ಅಭಿರತ್ ರೆಡ್ಡಿ(35 ರನ್,24 ಎಸೆತ)ಗರಿಷ್ಠ ಸ್ಕೋರ್ ಗಳಿಸಿದರು.
ಏಳು ವಿಕೆಟ್ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿರುವ ಮುಂಬೈ ತಂಡವು ಸೋಮವಾರದಂದು ಇದೇ ಮೈದಾನದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ. ಕ್ರಮವಾಗಿ ನ.18, 20, 22, 24 ಹಾಗೂ 26ರಂದು ಗೋವಾ, ವಿದರ್ಭ, ಛತ್ತೀಸ್ಗಡ, ಒಡಿಶಾ ಹಾಗೂ ಉತ್ತರಾಖಂಡ ತಂಡಗಳನ್ನು ಎದುರಿಸಲಿದೆ.






