ಶ್ರೇಯಸ್ ಅಯ್ಯರ್ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ : ಸೂರ್ಯಕುಮಾರ್

Photo Credit: PTI
ಕ್ಯಾನ್ಬೆರ್ರಾ, ಅ.28: ‘‘ಶ್ರೇಯಸ್ ಅಯ್ಯರ್ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ನಮಗೆ ಫೋನ್ನಲ್ಲಿ ಉತ್ತರಿಸುತ್ತಿದ್ದಾರೆ ಎಂದರೆ ಅವರು ಸಂಪೂರ್ಣವಾಗಿ ಚೆನ್ನಾಗಿದ್ದಾರೆ ಎಂದರ್ಥ. ಈ ಘಟನೆ ದುರದೃಷ್ಟಕರ. ವೈದ್ಯರು ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಮುಂದಿನ ಕೆಲವು ದಿನಗಳ ತನಕ ಅವರನ್ನು ನೋಡಿಕೊಳ್ಳಲಾಗುತ್ತದೆ. ಆದರೆ ಅವರ ಬಗ್ಗೆ ಚಿಂತಿಸಬೇಕಾಗಿಲ್ಲ’’ಎಂದು ಆಸ್ಟ್ರೇಲಿಯ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗಿಂತ ಮೊದಲು ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಹೇಳಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಕ್ಯಾಚ್ ಹಿಡಿಯುವಾಗ ಗಂಭೀರ ಗಾಯಗೊಂಡಿದ್ದ ಅಯ್ಯರ್ ತಕ್ಷಣವೇ ಸಿಡ್ನಿಯ ಆಸ್ಪತ್ರೆಗೆ ದಾಖಲಾಗಿದ್ದರು. ಹರ್ಷಿತ್ ರಾಣಾ ಎಸೆತದಲ್ಲಿ ಅಲೆಕ್ಸ್ ಕ್ಯಾರಿಯವರನ್ನು ಡೈವಿಂಗ್ ಕ್ಯಾಚ್ ಮೂಲಕ ಅಯ್ಯರ್ ಔಟ್ ಮಾಡಿದ್ದರು. ಈ ವೇಳೆ ಅವರು ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು.
ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಅಯ್ಯರ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಅಡಿಲೇಡ್ನಲ್ಲಿ ನಡೆದಿದ್ದ 2ನೇ ಏಕದಿನ ಪಂದ್ಯದಲ್ಲಿ 77 ಎಸೆತಗಳಲ್ಲಿ 61 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಸರಣಿಯ 2 ಪಂದ್ಯಗಳಲ್ಲಿ ಒಟ್ಟು 72 ರನ್ ಗಳಿಸಿದ್ದರು.
ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅಯ್ಯರ್ ಅವರು ನ.30ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ.
ಈ ವರ್ಷ ಕೆ.ಎಲ್.ರಾಹುಲ್ ಹಾಗೂ ಅಕ್ಷರ್ ಪಟೇಲ್ ಅವರೊಂದಿಗೆ ಸೇರಿಕೊಂಡು ಭಾರತದ ಮಧ್ಯಮ ಸರದಿಯಲ್ಲಿ ಅಯ್ಯರ್ ಆಧಾರವಾಗಿದ್ದರು. 2025ರಲ್ಲಿ ಅಯ್ಯರ್ 11 ಪಂದ್ಯಗಳಲ್ಲಿ 5 ಅರ್ಧಶತಕಗಳ ಸಹಿತ ಒಟ್ಟು 496 ರನ್ ಗಳಿಸಿದ್ದಾರೆ.
ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಅರ್ಧಶತಕಗಳ ಸಹಿತ 5 ಇನಿಂಗ್ಸ್ಗಳಲ್ಲಿ ಒಟ್ಟು 243 ರನ್ ಗಳಿಸಿದ್ದು, ಪಂದ್ಯಾವಳಿಯಲ್ಲಿ 2ನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು.







