ಮುಂಬೈ ಇಂಡಿಯನ್ಸ್ ನಿಂದ ಹೊರನಡೆಯಲಿದ್ದಾರಾ ಸೂರ್ಯಕುಮಾರ್ ಯಾದವ್?

ಸೂರ್ಯಕುಮಾರ್ ಯಾದವ್ (Photo credit: BCCI/PTI)
ಮುಂಬೈ: ಭಾರತದ ಟಿ20 ತಂಡದಿಂದ ಹೊರಗುಳಿದಿರುವ ಸೂರ್ಯಕುಮಾರ್ ಯಾದವ್ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುಂಬೈ ಇಂಡಿಯನ್ಸ್ಗೆ ಸಂಬಂಧಿಸಿದ ಚಿತ್ರಗಳು ಮತ್ತು ಉಲ್ಲೇಖಗಳು ಕಾಣಿಸದಿರುವುದು, ಅವರು ಐಪಿಎಲ್ ಫ್ರಾಂಚೈಸಿಯಿಂದ ಹೊರನಡೆಯುವ ಸಾಧ್ಯತೆಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.
2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ನಿಂದ ಮುಂಬೈ ಇಂಡಿಯನ್ಸ್ಗೆ ಸೇರ್ಪಡೆಯಾದ ಸೂರ್ಯಕುಮಾರ್, ತಂಡದ ಪ್ರಮುಖ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದರು. ಹಲವು ವರ್ಷಗಳಿಂದ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, 2026ರ ನಿರಾಶಾದಾಯಕ ಋತುವಿನ ಬಳಿಕ ತಮ್ಮ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ.
ಸೋಮವಾರ ಬೆಳಿಗ್ಗೆ ಅಭಿಮಾನಿಗಳು ಸೂರ್ಯಕುಮಾರ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ, ಮುಂಬೈ ಇಂಡಿಯನ್ಸ್ ಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಗಳು ಅಥವಾ ಉಲ್ಲೇಖಗಳು ಕಾಣಿಸಲಿಲ್ಲ. ಅಲ್ಲದೆ, ಅವರು ಫಾಲೋ ಮಾಡುತ್ತಿರುವ ಖಾತೆಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಖಾತೆಗಳೂ ಕಾಣಿಸಿಲ್ಲ ಎಂದು ವರದಿಯಾಗಿದೆ.
ಸೂರ್ಯಕುಮಾರ್ ಅವರ ಖಾತೆಯಲ್ಲಿ ಮುಂಬೈ ಇಂಡಿಯನ್ಸ್ಗೆ ಸಂಬಂಧಿಸಿದಂತೆ ಉಳಿದಿದ್ದ ಏಕೈಕ ಚಿತ್ರದಲ್ಲಿ ಅವರು ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
2026ರ ಐಪಿಎಲ್ನಲ್ಲಿ ಸೂರ್ಯಕುಮಾರ್ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. 13 ಪಂದ್ಯಗಳಲ್ಲಿ ಅವರು 270 ರನ್ ಗಳಿಸಿದ್ದು, ಸರಾಸರಿ 20.77 ಆಗಿತ್ತು. ಎರಡು ಅರ್ಧಶತಕಗಳನ್ನು ಮಾತ್ರ ದಾಖಲಿಸಿದ್ದ ಅವರು ತಂಡವನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯಲು ವಿಫಲರಾದರು. ಮುಂಬೈ ಇಂಡಿಯನ್ಸ್ ಕೂಡ ಹತ್ತು ತಂಡಗಳ ಪೈಕಿ ಒಂಭತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಆಯ್ಕೆ ನಿರ್ಧಾರಕ್ಕೆ ಅಶ್ವಿನ್ ಅಸಮಾಧಾನ
ಭಾರತದ ಟಿ20 ತಂಡದಲ್ಲಿ ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿರುವ ನಿರ್ಧಾರಕ್ಕೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ತಂಡದಿಂದ ಹೊರಗುಳಿದಾಗ ಯಾವುದೇ ಆಟಗಾರ ನಿರಾಶೆ ಅನುಭವಿಸುವುದು ಸಹಜ. ಸೂರ್ಯಕುಮಾರ್ ಅವರ ಬ್ಯಾಟಿಂಗ್ ಪ್ರದರ್ಶನ ಕಳೆದ 15ರಿಂದ 18 ತಿಂಗಳುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬುದು ಸತ್ಯ. ಆದರೆ ಅವರು ಭಾರತ ತಂಡದ ಟಿ20 ವಿಶ್ವಕಪ್ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದನ್ನು ಮರೆಯಬಾರದು," ಎಂದು ಅಶ್ವಿನ್ ಹೇಳಿದ್ದಾರೆ.
"ವಿಶ್ವಕಪ್ನಲ್ಲಿ ಅವರು ಅಗ್ರ ಬ್ಯಾಟರ್ ಆಗಿರದಿದ್ದರೂ, ತಂಡದ ಯಶಸ್ಸಿಗೆ ತಮ್ಮ ಕೊಡುಗೆಯನ್ನು ನೀಡಿದ್ದರು. ಕೋಚ್, ನಾಯಕ, ಬ್ಯಾಟರ್ ಹಾಗೂ ಬೌಲರ್ಗಳಂತೆ ಅವರ ಪಾತ್ರವೂ ಮಹತ್ವದ್ದಾಗಿತ್ತು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದಿಂದ ಹೊರಗುಳಿದಿರುವುದು, ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ಹಾಗೂ ಸಾಮಾಜಿಕ ಜಾಲತಾಣದಲ್ಲಿನ ಇತ್ತೀಚಿನ ಬದಲಾವಣೆಗಳು ಸೂರ್ಯಕುಮಾರ್ ಅವರ ಭವಿಷ್ಯದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿವೆ. ಅವರು ಮುಂಬೈ ಇಂಡಿಯನ್ಸ್ನಲ್ಲೇ ಮುಂದುವರಿಯಲಿದ್ದಾರೆಯೇ ಅಥವಾ ಹೊಸ ತಂಡದತ್ತ ಮುಖ ಮಾಡಲಿದ್ದಾರೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.






