ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮತ್ತೊಂದು ದಾಖಲೆ ಸೃಷ್ಟಿಸಿದ ಸೂರ್ಯವಂಶಿ

Photo: x.com/Indooshan
ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ತಂಡದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಐಪಿಎಲ್-2026ರಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಮಂಗಳವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 93 ರನ್ ಸಿಡಿಸಿದ ಅವರು ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದರು.
ಕೇವಲ 15 ವರ್ಷ ವಯಸ್ಸಿನ ಬ್ಯಾಟಿಂಗ್ ಸೆನ್ಸೇಷನ್, ಐಪಿಎಲ್ ಇತಿಹಾಸದ ಒಂದೇ ಸೀಸನ್ನಲ್ಲಿ 500 ರನ್ಗಳ ಮೈಲುಗಲ್ಲು ದಾಟಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಈ ದಾಖಲೆ ರಿಷಭ್ ಪಂತ್ ಹೆಸರಿನಲ್ಲಿತ್ತು. ಡೆಲ್ಲಿ ಕ್ಯಾಪಿಟಲ್ಸ್ (ಹಿಂದಿನ ಡೆಲ್ಲಿ ಡೇರ್ಡೆವಿಲ್ಸ್) ಪರ ಆಡುತ್ತಿದ್ದ ರಿಷಭ್ 2018ರ ಸೀಸನ್ನಲ್ಲಿ 20ನೇ ವಯಸ್ಸಿನಲ್ಲಿ ಈ ದಾಖಲೆ ನಿರ್ಮಿಸಿದ್ದರು.
ಪ್ರಸಕ್ತ ವರ್ಷದ ಐಪಿಎಲ್ನಲ್ಲಿ ಅತ್ಯಧಿಕ ಸ್ಟ್ರೈಕ್ರೇಟ್ನೊಂದಿಗೆ 500 ರನ್ ಗಳಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಈ ಸೀಸನ್ನಲ್ಲಿ ಸೂರ್ಯವಂಶಿ 236.3 ಸ್ಟ್ರೈಕ್ರೇಟ್ ಹೊಂದಿದ್ದಾರೆ. 2019ರ ಸೀಸನ್ನಲ್ಲಿ ಆಂಡ್ರೆ ರಸೆಲ್ 204.8 ಸ್ಟ್ರೈಕ್ರೇಟ್ ಹೊಂದಿದ್ದು ಇದುವರೆಗಿನ ದಾಖಲೆಯಾಗಿತ್ತು. ಅಭಿಷೇಕ್ ಶರ್ಮಾ ಮೂರನೇ ಸ್ಥಾನದಲ್ಲಿದ್ದು, 202.0 ಸ್ಟ್ರೈಕ್ರೇಟ್ ಹೊಂದಿದ್ದಾರೆ. ನಿಕೋಲಸ್ ಪೂರನ್ (2025ರಲ್ಲಿ 196.2), ಟ್ರಾವಿಸ್ ಹೆಡ್ (2024ರಲ್ಲಿ 191.5), ಗ್ಲೆನ್ ಮ್ಯಾಕ್ಸ್ವೆಲ್ (2014ರಲ್ಲಿ 187.7) ಹಾಗೂ ಕ್ರಿಸ್ ಗೇಲ್ (2011ರಲ್ಲಿ 183.1) ನಂತರದ ಸ್ಥಾನಗಳಲ್ಲಿದ್ದಾರೆ.
ಒಂದೇ ಐಪಿಎಲ್ ಸೀಸನ್ನಲ್ಲಿ 50ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಗೂ ಸೂರ್ಯವಂಶಿ ಪಾತ್ರರಾದರು. 2026ರ ಸೀಸನ್ನಲ್ಲಿ ಸೂರ್ಯವಂಶಿ 53 ಸಿಕ್ಸರ್ ಸಿಡಿಸಿದ್ದಾರೆ.
ಒಂದೇ ಸೀಸನ್ನಲ್ಲಿ ಗರಿಷ್ಠ ಸಿಕ್ಸರ್ಗಳ (2012ರಲ್ಲಿ 59) ದಾಖಲೆಯು ಕ್ರಿಸ್ ಗೇಲ್ ಹೆಸರಿನಲ್ಲಿದೆ. ಸೂರ್ಯವಂಶಿ ಎರಡನೇ ಸ್ಥಾನದಲ್ಲಿದ್ದು, ಆಂಡ್ರೆ ರಸೆಲ್ (2019ರಲ್ಲಿ 52), ಕ್ರಿಸ್ ಗೇಲ್ (2013ರಲ್ಲಿ 51), ಜೋಸ್ ಬಟ್ಲರ್ (2022ರಲ್ಲಿ 45), ಕ್ರಿಸ್ ಗೇಲ್ (2011ರಲ್ಲಿ 44) ಮತ್ತು ಅಭಿಷೇಕ್ ಶರ್ಮಾ (2024ರಲ್ಲಿ 42) ನಂತರದ ಸ್ಥಾನಗಳಲ್ಲಿದ್ದಾರೆ.






