ಗೇಲ್ ರಂತೆ ಸೂರ್ಯವಂಶಿ ಬೌಲರ್ ಗಳಿಗೆ ಭೀತಿ ಹುಟ್ಟಿಸುತ್ತಿದ್ದಾರೆ: ಇರ್ಫಾನ್ ಪಠಾಣ್

ವೈಭವ್ ಸೂರ್ಯವಂಶಿ , ಇರ್ಫಾನ್ ಪಠಾಣ್ | Photo Credit: PTI
ಹೊಸದಿಲ್ಲಿ, ಮೇ 20: ಟಿ-20 ಕ್ರಿಕೆಟ್ ನ ದಂತಕತೆ ಕ್ರಿಸ್ ಗೇಲ್ ತಮ್ಮ ಉತ್ತುಂಗದ ಕಾಲದಲ್ಲಿ ಬೌಲರ್ ಗಳಿಗೆ ಹುಟ್ಟಿಸುತ್ತಿದ್ದ ರೀತಿಯ ಭಯವನ್ನು ಯುವ ಆಟಗಾರ ವೈಭವ್ ಸೂರ್ಯವಂಶಿ ಈಗ ಸೃಷ್ಟಿಸುತ್ತಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಶ್ಲಾಘಿಸಿದ್ದಾರೆ.
ಐಪಿಎಲ್ನ ಒಂದೇ ಋತುವಿನಲ್ಲಿ 59 ಸಿಕ್ಸರ್ ಗಳನ್ನು ಸಿಡಿಸಿರುವ ಕ್ರಿಸ್ ಗೇಲ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿಯುವ ಹಾದಿಯಲ್ಲಿ ಸೂರ್ಯವಂಶಿ ಇದ್ದಾರೆ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
15 ವರ್ಷದ ಸೂರ್ಯವಂಶಿ ಅವರ ಮತ್ತೊಂದು ಮಹತ್ವದ ಇನಿಂಗ್ಸ್ ನ ಬಲದಿಂದ ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಮಂಗಳವಾರ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಏಳು ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗಿರುವ ರಾಜಸ್ಥಾನ ರಾಯಲ್ಸ್ ತಂಡವು 2026ರ ಐಪಿಎಲ್ನ ಪ್ಲೇಆಫ್ ಹಂತಕ್ಕೇರುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿದೆ.
ಗೆಲ್ಲಲು 221 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡದ ಇನಿಂಗ್ಸ್ ಆರಂಭಿಸಿದ ಸೂರ್ಯವಂಶಿ, ಕೇವಲ 38 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ಗಳ ಸಹಾಯದಿಂದ 93 ರನ್ ಗಳಿಸಿದರು.
ಸ್ಫೋಟಕ ಶೈಲಿಯ ಬ್ಯಾಟಿಂಗ್ನ ಮೂಲಕ ಸೂರ್ಯವಂಶಿ ಅವರು ಒಂದೇ ಐಪಿಎಲ್ ಋತುವಿನಲ್ಲಿ 50 ಸಿಕ್ಸರ್ಗಳನ್ನು ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ರನ್ ಚೇಸ್ ವೇಳೆ ಯಶಸ್ವಿ ಜೈಸ್ವಾಲ್ ಬಿರುಸಿನ ಬ್ಯಾಟಿಂಗ್ ನಡೆಸಿದರೆ, ಸೂರ್ಯವಂಶಿ ಮೊದಲ 10 ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಿ ಎಚ್ಚರಿಕೆಯ ಆರಂಭ ಪಡೆದಿದ್ದರು. ಕ್ರೀಸ್ ನಲ್ಲಿ ನೆಲವೂರಿದ ನಂತರ ಸೂರ್ಯವಂಶಿ ಅವರು ಆಕಾಶ್ ಸಿಂಗ್ ಎಸೆದ ಒಂದೇ ಓವರ್ ನಲ್ಲಿ 24 ರನ್ ಸಿಡಿಸಿದ್ದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.
ಪಂದ್ಯದ ನಂತರ ಮಾತನಾಡಿದ ಪಠಾಣ್, ಸೂರ್ಯವಂಶಿ ಬ್ಯಾಟಿಂಗ್ನಲ್ಲಿನ ಪ್ರಬುದ್ಧತೆ ಅವರ ಇನಿಂಗ್ಸ್ನ ಪ್ರಭಾವಶಾಲಿ ಅಂಶವಾಗಿದೆ ಎಂದು ಒತ್ತಿ ಹೇಳಿದರು.
‘‘ಇದು ನಂಬಲಸಾಧ್ಯವಾದುದು. ಅವರು ತೋರಿಸಿದ ಪ್ರಬುದ್ಧತೆ ನನಗೆ ಮುಖ್ಯವಾಗಿತ್ತು. ವೈಭವ್ ಸೂರ್ಯವಂಶಿ ಅವರನ್ನು ನೋಡಿದಾಗಲೆಲ್ಲಾ ಅವರು ಉತ್ತಮ ಲೆಗ್ ಸೈಡ್ ಆಟಗಾರ ಎಂದು ನಾವು ಯಾವಾಗಲೂ ಹೇಳುತ್ತೇವೆ. ಆದರೆ ಈ ಪಂದ್ಯದಲ್ಲಿ ಅವರು ಆಫ್ ಸೈಡ್ ನಲ್ಲಿ ಆಡಿದ ರೀತಿಯು ಅತ್ಯುತ್ತಮವಾಗಿತ್ತು. ಅವರು ತಮ್ಮ ಬ್ಯಾಕ್ ಲಿಫ್ಟ್ ಮೇಲೆ ಉತ್ತಮ ಹಿಡಿತ ಹೊಂದಿದ್ದಾರೆ. ಥರ್ಡ್ಮ್ಯಾನ್ ಮೇಲೆ ಅಪ್ಪರ್-ಕಟ್ ಕೂಡ ಆಡುತ್ತಿದ್ದರು. ಅವರನ್ನು ತಡೆಯುವುದು ತುಂಬಾ ಕಷ್ಟಕರ’’ ಎಂದು ‘ಜಿಯೋಸ್ಟಾರ್’ಗೆ ಪಠಾಣ್ ಹೇಳಿದರು.
‘‘ಮೊದಲ 10 ಎಸೆತಗಳಲ್ಲಿ ಸೂರ್ಯವಂಶಿಯ ಬ್ಯಾಟಿಂಗ್ ಸ್ಟ್ರೈಕ್ರೇಟ್ 100ಕ್ಕಿಂತ ಕಡಿಮೆ ಇತ್ತು. ಇನಿಂಗ್ಸ್ನ ಅಂತ್ಯಕ್ಕೆ 244.74ರ ಸ್ಟ್ರೈಕ್ರೇಟ್ನಲ್ಲಿ ಕೇವಲ 38 ಎಸೆತಗಳಲ್ಲಿ 93 ರನ್ ಸಿಡಿಸಿದ್ದರು’’ ಎಂದು ಪಠಾಣ್ ಹೇಳಿದ್ದಾರೆ.
ಸೂರ್ಯವಂಶಿಯ ಬ್ಯಾಟಿಂಗ್ ಶೈಲಿಯನ್ನು ಕ್ರಿಸ್ ಗೇಲ್ಗೆ ಹೋಲಿಸಿದ ಭಾರತದ ಮಾಜಿ ಆಲ್ರೌಂಡರ್ ಪಠಾಣ್, ‘‘ವೆಸ್ಟ್ಇಂಡೀಸ್ ಐಕಾನ್ ಗೇಲ್ ವಿರುದ್ಧ ಈ ಹಿಂದೆ ಅನುಭವಿಸಿದ್ದ ಭಯವನ್ನು ಬೌಲರ್ಗಳು ಈಗ ಸೂರ್ಯವಂಶಿ ಎದುರು ಅನುಭವಿಸುತ್ತಿದ್ದಾರೆ. ಇದೀಗ 53 ಸಿಕ್ಸರ್ಗಳನ್ನು ಸಿಡಿಸಿರುವ ಸೂರ್ಯವಂಶಿ ಅವರು ಗೇಲ್ ಅವರ ಸಿಕ್ಸರ್ ದಾಖಲೆಯನ್ನು (59) ಮುರಿಯುವ ಹಾದಿಯಲ್ಲಿದ್ದಾರೆ. 2012ರಿಂದ ಈ ದಾಖಲೆ ಉಳಿದುಕೊಂಡಿದೆ. ಬೌಲರ್ಗಳಾಗಿ ನಾವು ಯಾವಾಗಲೂ ಕ್ರಿಸ್ ಗೇಲ್ ಅವರನ್ನು ಎದುರಿಸಲು ಭಯಪಡುತ್ತಿದ್ದೆವು. ವೈಭವ್ ಸೂರ್ಯವಂಶಿ ಕೂಡ ಇದೇ ರೀತಿಯ ಭಯ ಸೃಷ್ಟಿಸುತ್ತಿದ್ದಾರೆ. ಕ್ರಿಸ್ ಗೇಲ್ ನಿರ್ಮಿಸಿದ್ದ ದಾಖಲೆ ಈಗ ಅಪಾಯದಲ್ಲಿದೆ’’ ಎಂದು ಪಠಾಣ್ ಹೇಳಿದ್ದಾರೆ.






