ಭಾರತದ T20 ತಂಡಕ್ಕೆ ಸೂರ್ಯವಂಶಿ ಸೇರ್ಪಡೆಗೊಳಿಸಬೇಕು: ಸುನೀಲ್ ಗವಾಸ್ಕರ್

ವೈಭವ್ ಸೂರ್ಯವಂಶಿ , ಸುನೀಲ್ ಗವಾಸ್ಕರ್ | Photo Credit : PTI
ಮುಂಬೈ, ಮೇ 29: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಐತಿಹಾಸಿಕ ಸಾಧನೆಗಳ ಮೂಲಕ ಹಲವು ದಾಖಲೆಗಳನ್ನು ಮುರಿದಿರುವ 15 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ, ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬಲ್ಲ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಕಿರಿಯ ಆರಂಭಿಕ ಆಟಗಾರ ಪಂದ್ಯಾವಳಿಯುದ್ದಕ್ಕೂ ಬೌಲರ್ ಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ. ಈ ಋತುವಿನ 15 ಪಂದ್ಯಗಳಲ್ಲಿ 242.85ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 680 ರನ್ ಗಳಿಸಿದ್ದಾರೆ.
ಐಪಿಎಲ್ನ ಒಂದೇ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಕ್ರಿಸ್ ಗೇಲ್ ಅವರ ದೀರ್ಘಕಾಲದ ದಾಖಲೆಯೊಂದನ್ನು ಸೂರ್ಯವಂಶಿ ಮುರಿದಿದ್ದಾರೆ. ಅವರು ಈವರೆಗೆ 65 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ತಮ್ಮ ಅಸಾಮಾನ್ಯ ಪ್ರದರ್ಶನದ ಮೂಲಕ ಸೂರ್ಯವಂಶಿ ಕ್ರಿಕೆಟ್ನ ಕೆಲವು ಶ್ರೇಷ್ಠ ಆಟಗಾರರೊಂದಿಗೆ ಹೋಲಿಸಲ್ಪಡುತ್ತಿದ್ದಾರೆ. ಕೆಲವರು ಅವರನ್ನು ಕ್ರಿಸ್ ಗೇಲ್ ಹಾಗೂ ಸಚಿನ್ ತೆಂಡುಲ್ಕರ್ಗೆ ಹೋಲಿಸುತ್ತಿದ್ದರೆ, ಆಸ್ಟ್ರೇಲಿಯಾದ ಮಾಜಿ ಕೋಚ್ ಟಾಮ್ ಮೂಡಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡಾನ್ ಬ್ರಾಡ್ಮನ್ಗೆ ಹೋಲಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಸೂರ್ಯವಂಶಿ ಬೆಂಬಲಕ್ಕೆ ನಿಂತಿದ್ದಾರೆ.
"ವೈಭವ್ ಸೂರ್ಯವಂಶಿ ನಿಶ್ಚಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಸಜ್ಜಾಗಿದ್ದಾರೆ. ಮುಂದಿನ ಇಂಗ್ಲೆಂಡ್ ಪ್ರವಾಸಕ್ಕೆ ಭಾರತದ ಟಿ-20 ತಂಡದಲ್ಲಿ ಅವರನ್ನು ಆಯ್ಕೆ ಮಾಡಬೇಕು. ಇಂತಹ ಅಮೋಘ ಪ್ರದರ್ಶನದ ಬಳಿಕವೂ ಅವರನ್ನು ಆಯ್ಕೆ ಮಾಡದಿದ್ದರೆ, ಇನ್ಯಾರನ್ನು ಆಯ್ಕೆ ಮಾಡುತ್ತೀರಿ? ಅವರ ವಯಸ್ಸನ್ನು ನೋಡಬೇಡಿ. ತನಗಿಂತ 15 ವರ್ಷ ಹಿರಿಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವಿ ಬೌಲರ್ಗಳ ಎದುರು ಅವರು ಆಡಿದ ರೀತಿಯನ್ನು ಗಮನಿಸಬೇಕು. ಅವರೊಬ್ಬ ನಿರ್ಭೀತಿಯ ಬ್ಯಾಟರ್" ಎಂದು ಗವಾಸ್ಕರ್ 'ಸ್ಪೋರ್ಟ್ಸ್ ತಕ್'ಗೆ ತಿಳಿಸಿದ್ದಾರೆ.






