ಸಚಿನ್ ಹಾದಿಯಲ್ಲಿ ಸೂರ್ಯವಂಶಿ ಮುನ್ನಡೆಯಲಿ: ವೆಂಗ್ಸರ್ಕಾರ್ ಸಲಹೆ

ವೈಭವ್ ಸೂರ್ಯವಂಶಿ | Photo Credit : PTI
ಮುಂಬೈ: ಅತಿಕಿರಿಯ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಸಜ್ಜಾಗಿರುವ ವೈಭವ್ ಸೂರ್ಯವಂಶಿ, ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಶಿಸ್ತು, ಏಕಾಗ್ರತೆ ಮತ್ತು ಮಾನಸಿಕ ದೃಢತೆಯನ್ನು ಮಾದರಿಯಾಗಿ ತೆಗೆದುಕೊಂಡು ಮುಂದುವರಿಯಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದಿಲೀಪ್ ವೆಂಗ್ಸರ್ಕಾರ್ ಸಲಹೆ ನೀಡಿದ್ದಾರೆ.
ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿರುವ 15 ವರ್ಷದ ವೈಭವ್ ಸೂರ್ಯವಂಶಿ, ಮುಂದಿನ ಕೆಲ ದಿನಗಳು ಅಥವಾ ವಾರಗಳಲ್ಲಿ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವಾಡುವ ಸಾಧ್ಯತೆ ಇದೆ. ಅವರು ಪದಾರ್ಪಣೆ ಮಾಡಿದರೆ, ಭಾರತದ ಪರ ಅಂತರರಾಷ್ಟ್ರೀಯ ಪಂದ್ಯವಾಡಿದ ಅತಿ ಕಿರಿಯ ಆಟಗಾರ ಎಂಬ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ದೀರ್ಘಾವಧಿಯ ದಾಖಲೆಯನ್ನು ಮುರಿಯಲಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು 1989ರಲ್ಲಿ ಪಾಕಿಸ್ತಾನ ವಿರುದ್ಧ 16ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಸೂರ್ಯವಂಶಿ ಒಂದು ವರ್ಷ ಮುಂಚಿತವಾಗಿಯೇ ಈ ಮೈಲುಗಲ್ಲು ಸಾಧಿಸುವ ಅವಕಾಶ ಹೊಂದಿದ್ದಾರೆ.
ಬೆಲ್ಫಾಸ್ಟ್ನಲ್ಲಿ ಶುಕ್ರವಾರ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲೇ ಹದಿಹರೆಯದ ಸೂರ್ಯವಂಶಿ ಪದಾರ್ಪಣೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರು ವಿಶ್ವಕಪ್ ವಿಜೇತ ಆರಂಭಿಕ ಜೋಡಿಯಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರನ್ನೇ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದರು.
ಪ್ರಸಕ್ತ ಐಪಿಎಲ್ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿರುವ ವೈಭವ್ ಸೂರ್ಯವಂಶಿ 700ಕ್ಕೂ ಹೆಚ್ಚು ರನ್ ಗಳಿಸಿ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸೂರ್ಯವಂಶಿ, ಸಚಿನ್ ಅವರ ವೃತ್ತಿಜೀವನದ ಗುಣಲಕ್ಷಣಗಳನ್ನು ಅನುಸರಿಸುವುದು ಸೂಕ್ತ ಎಂದು ವೆಂಗ್ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
‘ಸಚಿನ್ ಅವರನ್ನು ಆ ವಯಸ್ಸಿನಲ್ಲೇ ನೋಡಿದಾಗ ಅವರ ಮಾನಸಿಕ ಪ್ರೌಢಿಮೆ ಗಮನ ಸೆಳೆದಿತ್ತು. ಅವರು ಮುಂಬೈನ ಅಂತರಶಾಲಾ ಹಾಗೂ ಕ್ಲಬ್ ಕ್ರಿಕೆಟ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಸೂರ್ಯವಂಶಿಯೂ ತಮ್ಮ ಪ್ರದರ್ಶನದ ಮೂಲಕ ಅವಕಾಶ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಅವಕಾಶ ಸಿಕ್ಕಾಗ ಅದನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವ ಸಾಮರ್ಥ್ಯ ಅವರಲ್ಲಿದೆ. ಅವರ ಪ್ರತಿಭೆ ನಿಜಕ್ಕೂ ಅಸಾಧಾರಣವಾಗಿದೆ’ ಎಂದು ವೆಂಗ್ಸರ್ಕಾರ್ ಹೇಳಿದ್ದಾರೆ.






