ಮೊದಲ T20 ಅಂತರ್ರಾಷ್ಟ್ರೀಯ ಪಂದ್ಯ | ಸೂರ್ಯವಂಶಿ ಅಬ್ಬರದ ಅರ್ಧಶತಕ; ಝಿಂಬಾಬ್ವೆ ವಿರುದ್ಧ ಭಾರತಕ್ಕೆ 7 ವಿಕೆಟ್ ಗಳ ಜಯ

ಸೂರ್ಯವಂಶಿ | Photo Credit : PTI
ಹರಾರೆ, ಜು.23: ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಅಬ್ಬರದ ಚೊಚ್ಚಲ ಅರ್ಧಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಝಿಂಬಾಬ್ವೆ ತಂಡದ ವಿರುದ್ಧ ಮೊದಲ T20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಏಳು ವಿಕೆಟ್ಗಳ ಅಂತರದಿಂದ ಜಯಶಾಲಿಯಾಗಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಮೂಲಕ ಶ್ರೇಯಸ್ ಅಯ್ಯರ್ ಭಾರತದ T20 ತಂಡದ ನಾಯಕನಾಗಿ ಮೊದಲ ಗೆಲುವು ದಾಖಲಿಸಿದರು. ಅಯ್ಯರ್ ನಾಯಕತ್ವದಲ್ಲಿ ಭಾರತ ತಂಡವು ಸತತ ಏಳು ಪಂದ್ಯಗಳಲ್ಲಿ ಸೋಲುಂಡಿತ್ತು.
ಗುರುವಾರ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಮೊದಲ T20 ಪಂದ್ಯದಲ್ಲಿ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳ ಸಹಾಯದಿಂದ ಅರ್ಧಶತಕವನ್ನು ಪೂರೈಸಿದರು. T20 ಕ್ರಿಕೆಟ್ನಲ್ಲಿ ಅರ್ಧಶತಕ ಗಳಿಸಿದ ಕಿರಿಯ ಆಟಗಾರನಾಗಿ ಇತಿಹಾಸ ನಿರ್ಮಿಸಿದರು.
ಟಾಸ್ ಜಯಿಸಿದ ಅಯ್ಯರ್ ಮೊದಲು ಬೌಲಿಂಗ್ ಆಯ್ದುಕೊಂಡರು. ಅಮೋಘ ಪ್ರದರ್ಶನದ ಮೂಲಕ ಭಾರತೀಯ ವೇಗದ ಬೌಲರ್ಗಳು ನಾಯಕನ ನಿರ್ಧಾರ ಸಮರ್ಥಿಸಿಕೊಂಡರು.
ಗಾಯದಿಂದ ಚೇತರಿಸಿಕೊಂಡು 2024ರ ನಂತರ ಮೊದಲ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡಿದ ಮಯಾಂಕ್ ಯಾದವ್ (2-18) ಪಂದ್ಯದ ಮೊದಲ ಎಸೆತದಲ್ಲೇ ಬ್ರಿಯಾನ್ ಬೆನ್ನೆಟ್ ವಿಕೆಟ್ ಅನ್ನು ಉರುಳಿಸಿದರು. ಆ ನಂತರ ಡಿಯೊನ್ ಮೈಯರ್ಸ್ಗೆ ಪೆವಿಲಿಯನ್ ಹಾದಿ ತೋರಿಸಿದರು.
ಝಿಂಬಾಬ್ವೆ ಪವರ್ಪ್ಲೇನೊಳಗೆ 26 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡಿತು. ನಾಯಕ ಸಿಕಂದರ್ ರಝಾ (4 ರನ್) ವಿಕೆಟ್ ಒಪ್ಪಿಸಿದಾಗ ಝಿಂಬಾಬ್ವೆ ತಂಡದ ಸ್ಕೋರ್ 32ಕ್ಕೆ 4.
ವೆಸ್ಲೆ ಮಧೆವೆರೆ (39 ರನ್), ರಿಯಾನ್ ಬರ್ಲ್ (26) ಹಾಗೂ ಮರುಮನಿ (27 ರನ್) ನೆರವಿನಿಂದ ಝಿಂಬಾಬ್ವೆ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 125 ರನ್ ಗಳಿಸಿತು.
ಗೆಲ್ಲಲು 126 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು ಅಭಿಷೇಕ್ ಶರ್ಮಾರನ್ನು ಕೇವಲ 1 ರನ್ಗೆ ಕಳೆದುಕೊಂಡಿತು. ಆಗ 15ರ ಹರೆಯದ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 50 ರನ್ ಸಿಡಿಸಿದರು. ನಾಯಕ ಶ್ರೇಯಸ್ ಅಯ್ಯರ್ 24 ಎಸೆತಗಳಲ್ಲಿ ಔಟಾಗದೆ 28 ರನ್ ಗಳಿಸಿದರು. ಕಿಶನ್ 24 ಎಸೆತಗಳಲ್ಲಿ 35 ರನ್ ಗಳಿಸಿದರು. ತಿಲಕ್ ವರ್ಮಾ ಗೆಲುವಿನ ರನ್ ಗಳಿಸಿದರು.
ಶ್ರೇಯಸ್ ಅಯ್ಯರ್ ಭಾರತದ T20 ತಂಡದ ನಾಯಕನಾಗಿ ಮೊದಲ ಗೆಲುವು ದಾಖಲಿಸಿದರು. ಐರ್ಲ್ಯಾಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಏಳು ಪಂದ್ಯಗಳಲ್ಲಿ ಸೋಲನುಭವಿಸಿ ಹತಾಶರಾಗಿದ್ದರು. ಸೂರ್ಯವಂಶಿ ಅವರ ದಾಖಲೆಯ ಬ್ಯಾಟಿಂಗ್ ಎಲ್ಲರ ಗಮನ ಸೆಳೆದಿದೆ.
ಸಂಕ್ಷಿಪ್ತ ಸ್ಕೋರ್
ಝಿಂಬಾಬ್ವೆ: 20 ಓವರ್ಗಳಲ್ಲಿ 125/7
(ವೆಸ್ಲೆ ಮಧೆವೆರೆ 39, ಮರುಮನಿ 27, ರಿಯಾನ್ ಬರ್ಲ್ 26, ಮಯಾಂಕ್ ಯಾದವ್ 2-18, ಪ್ರಿನ್ಸ್ ಯಾದವ್ 2-19)
ಭಾರತ: 13.2 ಓವರ್ಗಳಲ್ಲಿ 126/3
(ಸೂರ್ಯವಂಶಿ 50, ಕಿಶನ್ 35, ಶ್ರೇಯಸ್ ಅಯ್ಯರ್ ಔಟಾಗದೆ 28, ಮುಝರ್ಬನಿ 2-26)
ಪಂದ್ಯಶ್ರೇಷ್ಠ: ಮಯಾಂಕ್ ಯಾದವ್.






