ವಿಶ್ವದ ನಂ.1 ಆಟಗಾರ್ತಿ ಸ್ವಿಯಾಟೆಕ್ ಗೆ ಸೋಲುಣಿಸಿ ಸೆಮಿ ಫ್ರೆನಲ್ ತಲುಪಿದ ಸ್ವಿಟೋಲಿನಾ

Photo : twitter \ @ElinaSvitolina
ಲಂಡನ್: ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಗೆ 7-5, 6-7(5), 6-2 ಸೆಟ್ ಗಳ ಅಂತರದಿಂದ ಸೋಲುಣಿಸಿದ ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.
ಕಳೆದ ಅಕ್ಟೋಬರ್ ನಲ್ಲಿ ಹೆಣ್ಣುಮಗುವಿನ ತಾಯಿಯಾಗಿರುವ 28ರ ಹರೆಯದ ಸ್ವಿಟೋಲಿನಾ ನಿರ್ಭೀತಿಯಿಂದ ಆಡಿ ತನ್ನ ವಿಂಬಲ್ಡನ್ ಎದುರಾಳಿಯನ್ನು ಅಚ್ಚರಿಗೊಳಿಸಿದ್ದರು. ವಿಶ್ವದ ಮಾಜಿ ನಂ.3ನೇ ಆಟಗಾರ್ತಿ ಸ್ವಿಟೋಲಿನಾ ಮತ್ತೊಮ್ಮೆ ಅಗ್ರ ಸ್ಥಾನಕ್ಕೆ ಮರಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
ಸ್ವಿಟೋಲಿನಾ ಈ ವರ್ಷದ ವಿಂಬಲ್ಡನ್ ನಲ್ಲಿ ಸೆಮಿಫೈನಲ್ ಹಾದಿಯಲ್ಲಿ ನಾಲ್ವರು ಗ್ರ್ಯಾನ್ಸ್ಲಾಮ್ ಚಾಂಪಿಯನ್ನರನ್ನು ಸೋಲಿಸಿದ್ದಾರೆ. ವೀನಸ್ ವಿಲಿಯಮ್ಸ್ (ಮೊದಲ ಸುತ್ತು), ಸೋಫಿಯಾ ಕೆನಿನ್(ಮೂರನೇ ಸುತ್ತು), ವಿಕ್ಟೋರಿಯ ಅಝರೆಂಕಾ (ನಾಲ್ಕನೇ ಸುತ್ತು) ಹಾಗೂ ಇದೀಗ ಕಳೆದ ತಿಂಗಳು ಫ್ರೆಂಚ್ ಓಪನ್ ಜಯಿಸಿದ್ದ ನಾಲ್ಕು ಬಾರಿಯ ಚಾಂಪಿಯನ್ ಸ್ವಿಯಾಟೆಕ್ ಗೆ ಸೋಲುಣಿಸಿದ್ದಾರೆ.
‘‘ನನ್ನ ಪ್ರಕಾರ ಯುದ್ಧ ನನ್ನನ್ನು ಶಕ್ತಿಯುತವಾಗಿಸಿತು. ಮಾನಸಿಕವಾಗಿಯೂ ನಾನು ಸದೃಢನಾಗಿದ್ದೇನೆ. ಅಂಗಣದಲ್ಲಿನ ಕಠಿಣ ಪರಿಸ್ಥಿತಿಗಳನ್ನು ನಾನು ಲೆಕ್ಕ ಹಾಕುವುದಿಲ್ಲ.ನಾನು ಮತ್ತೊಮ್ಮೆ ಆಡಲು ಆರಂಭಿಸಿದ್ದೇನೆ....ನನಗೆ ಅಗ್ರ ಸ್ಥಾನಕ್ಕೆ ಮರಳಬೇಕೆಂಬ ದೊಡ್ಡ ಪ್ರೇರಣೆ ಇದೆ. ಮಗುವಿನ ಜನನ ಹಾಗೂ ದೇಶದಲ್ಲಿನ ಯುದ್ಧ ನನ್ನನ್ನು ವಿಭಿನ್ನ ವ್ಯಕ್ತಿಯನ್ನಾಗಿ ಮಾಡಿದೆ ಎಂದು ಉಕ್ರೇನ್ ಮೇಲೆ ರಶ್ಯದ ಅತಿಕ್ರಮಣವನ್ನು ಉಲ್ಲೇಖಿಸಿ ಸ್ವಿಟೋಲಿನಾ ಹೇಳಿದ್ದಾರೆ.
9 ತಿಂಗಳ ಮಗುವನ್ನು ಹೊಂದಿರುವ ಸ್ವಿಟೋಲಿನಾ ಗೆಲುವಿನ ಹಳಿಗೆ ಮರಳಲು ಐಟಿಎಫ್ ಟೂರ್ನಿಗಳಲ್ಲಿ ಆಡಿದ್ದಾರೆ.
ವೈರ್ಲ್ಡ್ಕಾರ್ಡ್ ಮೂಲಕ ವಿಂಬಲ್ಡನ್ ಪ್ರವೇಶಿಸಿದ್ದ ಸ್ವಿಟೋಲಿನಾ ವಿಂಬಲ್ಡನ್ ನಲ್ಲಿ ಸೆಮಿ ಫೈನಲ್ ತಲುಪಿದ ಮೂರನೇ ವೈರ್ಲ್ಡ್ ಕಾರ್ಡ್ ಆಟಗಾರ್ತಿಯಾಗಿದ್ದು, ದಶಕಗಳ ನಂತರ ಮೊದಲ ಬಾರಿ ಈ ಸಾಧನೆ ಮಾಡಿದ್ದಾರೆ.
ಸ್ವಿಟೋಲಿನಾ ಸೆಮಿ ಫೈನಲ್ನಲ್ಲಿ ಝೆಕ್ ನ ಎಡಗೈ ಆಟಗಾರ್ತಿ ಮಾರ್ಕೆಟಾ ವೊಂಡ್ರೊಸೋವಾರನ್ನು ಎದುರಿಸಲಿದ್ದಾರೆ. ವೊಂಡ್ರೊಸೋವಾ 4ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾರನ್ನು 6-4, 2-6, 6-4 ಸೆಟ್ ಗಳ ಅಂತರದಿಂದ ಸೋಲಿಸಿದ್ದಾರೆ.