ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಟೆನಿಸ್ ಟೂರ್ನಿ | ಸಿಂಧು, ಲಕ್ಷ್ಯ ಸೇನ್ಗೆ ಸಿಂಗಲ್ಸ್ ಪ್ರಶಸ್ತಿ

ಪಿ.ವಿ. ಸಿಂಧು | PC : PTI
ಲಕ್ನೊ : ಭಾರತದ ಹಿರಿಯ ಆಟಗಾರ್ತಿ ಪಿ.ವಿ. ಸಿಂಧು ಅವರು ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್-300 ಟೂರ್ನಮೆಂಟ್ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಸಿಂಧು ಎರಡು ವರ್ಷಗಳ ನಂತರ ಮೊದಲ ಬಾರಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ.
ಲಕ್ನೊದ ಬಾಬು ಬನಾರಸಿ ದಾಸ್ ಬ್ಯಾಡ್ಮಿಂಟನ್ ಅಕಾಡಮಿಯಲ್ಲಿ 47 ನಿಮಿಷಗಳಲ್ಲಿ ಕೊನೆಗೊಂಡಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸಿಂಧು ಚೀನಾದ ಲುವೊ ಯು ಅವರನ್ನು 21-14, 21-16 ಗೇಮ್ಗಳ ಅಂತರದಿಂದ ಮಣಿಸಿದರು.
29ರ ಹರೆಯದ ಸಿಂಧು 2022ರಲ್ಲಿ ಸಿಂಗಾಪುರ ಓಪನ್ನಲ್ಲಿ ಕೊನೆಯ ಬಾರಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಜಯಿಸಿದ್ದರು. ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಇದೀಗ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದಾರೆ. ಸಿಂಧು ಮೂರನೇ ಬಾರಿ ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
► ಲಕ್ಷ್ಯ ಸೇನ್ಗೆ ಪ್ರಶಸ್ತಿ:
ಇದೇ ವೇಳೆ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಸಿಂಗಾಪುರದ ಜಿಯಾ ಹೆಂಗ್ ಜೇಸನ್ ಅವರನ್ನು ಕೇವಲ 28 ನಿಮಿಷಗಳಲ್ಲಿ 21-6, 21-7 ನೇರ ಗೇಮ್ಗಳ ಅಂತರದಿಂದ ಸುಲಭವಾಗಿ ಸದೆ ಬಡಿದರು.
ಈ ಮೂಲಕ ಲಕ್ಷ್ಯ ಸೇನ್ ಅವರು ಇದೇ ಮೊದಲ ಬಾರಿ ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಇದು ಸೇನ್ ಗೆದ್ದಿರುವ 5ನೇ ಬಿಡಬ್ಲ್ಯುಎಫ್ ಟೂರ್ ಪ್ರಶಸ್ತಿಯಾಗಿದೆ.







