ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬೈ ತಂಡಕ್ಕೆ ಸೂರ್ಯಕುಮಾರ್, ಶಿವಮ್ ದುಬೆ ಲಭ್ಯ

ಸೂರ್ಯಕುಮಾರ್, ಶಿವಮ್ ದುಬೆ | Photo Credit : X
ಮುಂಬೈ, ನ. 20: ಮುಂದಿನ ವಾರ ಆರಂಭಗೊಳ್ಳಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡುವುದಕ್ಕಾಗಿ ಸೂರ್ಯಕುಮಾರ್ ಯಾದವ್ ಮತ್ತು ಶಿವಮ್ ದುಬೆ ಮುಂಬೈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ವಿಷಯವನ್ನು ಮುಂಬೈ ತಂಡದ ಮುಖ್ಯ ಆಯ್ಕೆಗಾರ ಸಂಜಯ್ ಪಾಟೀಲ್ ಖಚಿತಪಡಿಸಿದ್ದಾರೆ. ‘‘ನಾನು ಇಂದು ಸೂರ್ಯ ಅವರೊಂದಿಗೆ ಮಾತನಾಡಿದೆ. ಇಡೀ ಪಂದ್ಯಾವಳಿಗೆ ತಾನು ಲಭ್ಯವಿರುವುದಾಗಿ ಅವರು ಹೇಳಿದ್ದಾರೆ. ಶಿವಮ್ ಕೂಡ ಹೀಗೆಯೇ ಹೇಳಿದ್ದಾರೆ. ನಾವು ಶುಕ್ರವಾರ ತಂಡವನ್ನು ಆಯ್ಕೆ ಮಾಡುತ್ತೇವೆ’’ ಎಂದು ಅವರು ಹೇಳಿದರು.
ಪಂದ್ಯಾವಳಿಗೆ ಸೂರ್ಯಕುಮಾರ್ ಲಭ್ಯವಿದ್ದರೆ, ಮುಂಬೈ ಟಿ20 ತಂಡದ ನಾಯಕತ್ವವನ್ನು ಅವರಿಗೆ ವಹಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಅಂತಹ ನಿರ್ಧಾರವನ್ನು ಈವರೆಗೆ ತೆಗೆದುಕೊಂಡಿಲ್ಲ ಎಂದು ಅವರು ಸಂಜಯ್ ಸ್ಪಷ್ಟಪಡಿಸಿದರು.
ರಣಜಿ ಟ್ರೋಫಿಯಲ್ಲಿ, ಶಾರ್ದುಲ್ ಠಾಕೂರ್ ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅದು ಈಗ ‘ಡಿ’ ಗುಂಪಿನಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಮತ್ತು ದುಬೆ ಮುಂಬೈ ತಂಡದೊಂದಿಗೆ ಲಕ್ನೋಗೆ ತೆರಳಲಿದ್ದಾರೆ. ಆದರೆ, ಅವರು ಟ್ರೋಫಿಯ ಎಲ್ಲಾ ಲೀಗ್ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ. ಯಾಕೆಂದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯು ಡಿಸೆಂಬರ್ 9ರಂದು ಆರಂಭಗೊಳ್ಳಲಿದೆ.
‘‘ನಾವು ನಾಳೆ ಚರ್ಚೆ ಮಾಡುತ್ತೇವೆ ಮತ್ತು ಮುಂದಿನ ದಾರಿಯನ್ನು ನಿರ್ಧರಿಸುತ್ತೇವೆ. ಸದ್ಯಕ್ಕೆ, ಸೂರ್ಯ ಮತ್ತು ಶಿವಮ್ ಲಭ್ಯರಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ತಂಡವನ್ನು ಆಯ್ಕೆ ಮಾಡುತ್ತೇವೆ’’ ಎಂದು ಪಾಟೀಲ್ ಹೇಳಿದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತನ್ನ ಮೊದಲ ಪಂದ್ಯವನ್ನು ರೈಲ್ವೇಸ್ ವಿರುದ್ಧ ನವೆಂಬರ್ 26ರಂದು ಆಡಲಿದೆ.







