ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ | ಯಶಸ್ವಿ ಜೈಸ್ವಾಲ್ ಶತಕ; ಹರ್ಯಾಣಕ್ಕೆ ಸೋಲುಣಿಸಿದ ಮುಂಬೈ ತಂಡ

ಯಶಸ್ವಿ ಜೈಸ್ವಾಲ್ | Photo Credit : PTI
ನವಿ ಮುಂಬೈ, ಡಿ.14: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶತಕದ ಸಹಾಯದಿಂದ ಮುಂಬೈ ಕ್ರಿಕೆಟ್ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಹರ್ಯಾಣ ತಂಡದ ವಿರುದ್ಧ ನಾಲ್ಕು ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗಿದೆ.
ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಈ ಋತುವಿನಲ್ಲಿ ಮುಂಬೈ ಪರ ಕೇವಲ ಎರಡನೇ ಪಂದ್ಯವನ್ನಾಡಿದ ಜೈಸ್ವಾಲ್ ಅವರು ಸೂಪರ್ ಲೀಗ್ ಹಂತದಲ್ಲಿ ಮುಂಬೈ ತಂಡವು ಗೆಲುವಿಗೆ 235 ರನ್ ಚೇಸ್ ಮಾಡುತ್ತಿದ್ದಾಗ ಗಮನಾರ್ಹ ಪ್ರದರ್ಶನ ನೀಡಿ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ನೆರವಾದರು.
ಇನಿಂಗ್ಸ್ ಆರಂಭಿಸಿದ ಎಡಗೈ ಬ್ಯಾಟರ್ ಜೈಸ್ವಾಲ್ ಕೇವಲ 48 ಎಸೆತಗಳಲ್ಲಿ ತನ್ನ ಶತಕ ತಲುಪಿದರು. ಪಂದ್ಯದುದ್ದಕ್ಕೂ ಮುಂಬೈ ತಂಡ ರನ್ ರೇಟ್ನಲ್ಲಿ ಮುನ್ನಡೆ ಕಾಪಾಡಿಕೊಳ್ಳುವಲ್ಲಿ ನೆರವಾದರು.
ಮುಂಬೈ ತಂಡವು 17.3 ಓವರ್ಗಳಲ್ಲಿ 238 ರನ್ ಗಳಿಸಿತು. ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿತು. ಹೈದರಾಬಾದ್ ತಂಡದ ವಿರುದ್ಧ ಆಘಾತಕಾರಿ ಸೋಲನುಭವಿಸಿದ ನಂತರ ಈ ಪಂದ್ಯವು ಮುಂಬೈ ಪಾಲಿಗೆ ಮಾಡು-ಮಡಿ ಪಂದ್ಯವಾಗಿತ್ತು.
23ರ ಹರೆಯದ ಜೈಸ್ವಾಲ್ ಮುಂಬೈ ಪರ ಸ್ಪರ್ಧಾವಳಿಯಲ್ಲಿ ತನ್ನ ಚೊಚ್ಚಲ ಶತಕ ಗಳಿಸಿದರು. ತನ್ನ ವೃತ್ತಿಪರ ಬದುಕಿನಲ್ಲಿ 120 ಪಂದ್ಯಗಳಲ್ಲಿ ನಾಲ್ಕನೇ ಟಿ-20 ಶತಕ ದಾಖಲಿಸಿದರು.
ಜೈಸ್ವಾಲ್ 16 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 101 ರನ್ ಗಳಿಸಿದ ಬೆನ್ನಿಗೇ ವಿಕೆಟ್ ಒಪ್ಪಿಸಿದರು. ಈ ಹಿಂದೆ ನೇಪಾಳದ ವಿರುದ್ಧ ಭಾರತದ ಪರ ಶತಕ ಗಳಿಸಿದ್ದ ಜೈಸ್ವಾಲ್ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಎರಡು ಶತಕ ಗಳಿಸಿದ್ದರು.
ಇತ್ತೀಚೆಗಿನ ದಿನಗಳಲ್ಲಿ ಭಾರತದ ಟಿ-20 ಕ್ರಿಕೆಟ್ ಯೋಜನೆಗಳಲ್ಲಿ ಗೈರು ಹಾಜರಾಗಿರುವ ಜೈಸ್ವಾಲ್ ಪಾಲಿಗೆ ಇದು ಮಹತ್ವದ ಸಾಧನೆಯಾಗಿದೆ. 2024ರಲ್ಲಿ ಮೀಸಲು ಆರಂಭಿಕ ಆಟಗಾರನಾಗಿ ವಿಶ್ವ ಕಪ್ ವಿಜೇತ ತಂಡದ ಭಾಗವಾಗಿದ್ದರೂ, ಟೆಸ್ಟ್ ತಂಡದ ಪ್ರಮುಖ ಸದಸ್ಯನಾಗಿದ್ದರೂ ಚುಟುಕು ಮಾದರಿಯ ಕ್ರಿಕೆಟ್ ನಲ್ಲಿ ಹೆಚ್ಚು ಅವಕಾಶ ಪಡೆದಿಲ್ಲ.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಹರ್ಯಾಣ ತಂಡವು 3 ವಿಕೆಟ್ಗಳ ನಷ್ಟಕ್ಕೆ 234 ರನ್ ಗಳಿಸಿತು. ನಾಯಕ ಅಂಕಿತ್ ಕುಮಾರ್(89 ರನ್)ಹಾಗೂ ಆರಂಭಿಕ ಬ್ಯಾಟರ್ ಅರ್ಷ್ ರಂಗ(26 ರನ್)ಇನಿಂಗ್ಸ್ ಆರಂಭಿಸಿದರು. ನಿಶಾಂತ್ ಸಂಧು(63 ರನ್) ಅವರೊಂದಿಗೆ ಎರಡನೇ ವಿಕೆಟ್ಗೆ 110 ರನ್ ಜೊತೆಯಾಟ ನಡೆಸಿದರು. ಬೆರಳಿಗೆ ಗಾಯಗೊಂಡಿದ್ದರೂ ಜೀವದಾನದ ಲಾಭ ಪಡೆದ ಸಂಧು ಹಾಗೂ ಸಮಂತ್ ಜಾಖರ್(ಔಟಾಗದೆ 31)ಜೋಡಿ ಹರ್ಯಾಣ ತಂಡವು 20 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 234 ರನ್ ಗಳಿಸುವಲ್ಲಿ ನೆರವಾದರು.
ಜೈಸ್ವಾಲ್ ಹಾಗೂ ಸರ್ಪರಾಝ್ ಖಾನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ ಆರಂಭದಲ್ಲೇ ಪ್ರಾಬಲ್ಯ ಸಾಧಿಸಿತು. ಸರ್ಫರಾಝ್ ಖಾನ್ ಕೇವಲ 25 ಎಸೆತಗಳಲ್ಲಿ 9 ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ಸಹಿತ 64 ರನ್ ಗಳಿಸಿದ್ದಾರೆ. ಈ ಇಬ್ಬರು 88 ರನ್ ಜೊತೆಯಾಟ ನಡೆಸಿ ಮುಂಬೈ ತಂಡದ ಚೇಸ್ಗೆ ಬಲ ತುಂಬಿದರು.
*ಹೇಮಂತ್ ರೆಡ್ಡಿ ಶತಕ, ಆಂಧ್ರಕ್ಕೆ ಗೆಲುವು:
ಮತ್ತೊಂದು ಗರಿಷ್ಠ ಮೊತ್ತದ ಹಣಾಹಣಿಯಲ್ಲಿ ಆಂಧ್ರ ತಂಡ ಎನ್.ಹೇಮಂತ್ ರೆಡ್ಡಿ ಅವರ ಅಜೇಯ ಶತಕದ(109 ರನ್, 53 ಎಸೆತ)ಸಹಾಯದಿಂದ ಪಂಜಾಬ್ ತಂಡವನ್ನು ಐದು ವಿಕೆಟ್ಗಳ ಅಂತರದಿಂದ ಮಣಿಸಿ ಟೂರ್ನಿಯಿಂದ ಹೊರಗಟ್ಟಿದೆ.
ಎಂಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮಧ್ಯಮ ಸರದಿಯ ಬ್ಯಾಟರ್ಗಳ ಉತ್ತಮ ಕೊಡುಗೆಗಳ ನೆರವಿನಿಂದ ಪಂಜಾಬ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 205 ರನ್ ಗಳಿಸಿತು.
ಗೆಲ್ಲಲು 206 ರನ್ ಗುರಿ ಬೆನ್ನಟ್ಟಿದ ಆಂಧ್ರ ತಂಡವು 56 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಆಗ ರೆಡ್ಡಿ ಹಾಗೂ ಪ್ರಸಾದ್(ಔಟಾಗದೆ 53, 35 ಎಸೆತ)ಆರನೇ ವಿಕೆಟಿಗೆ 155 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಆಂಧ್ರ ತಂಡವು 19.5 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 211 ರನ್ ಗಳಿಸಿ ಗೆಲುವಿನ ನಗೆ ಬೀರಿತು.







