ಟಿ-20 ಕ್ರಿಕೆಟ್: ಇತಿಹಾಸ ನಿರ್ಮಿಸಿದ ಜೋಸ್ ಬಟ್ಲರ್

ಜೋಸ್ ಬಟ್ಲರ್ | PC : NDTV
ಲಂಡನ್, ಜು.18: ಲೀಡ್ಸ್ ನಲ್ಲಿ ಗುರುವಾರ ನಡೆದ ಯಾರ್ಕ್ಶೈರ್ ವಿರುದ್ಧದ ವಿಟಾಲಿಟಿ ಬ್ಲಾಸ್ಟ್ ಟಿ-20 ಪಂದ್ಯಾವಳಿಯಲ್ಲಿ ಲಂಕಾಶೈರ್ ಪರ ಆಡಿದ ಜೋಸ್ ಬಟ್ಲರ್ ಟಿ-20 ಕ್ರಿಕೆಟ್ ನಲ್ಲಿ 13,000 ರನ್ ಪೂರೈಸುವ ಮೂಲಕ ಮಹತ್ವದ ಮೈಲಿಗಲ್ಲು ತಲುಪಿದರು.
ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಈ ಮೈಲಿಗಲ್ಲು ತಲುಪಿದ 7ನೇ ಆಟಗಾರನಾಗಿದ್ದಾರೆ. ಲಂಕಾಶೈರ್ ವಿರುದ್ಧ 167.39ರ ಸ್ಟ್ರೈಕ್ರೇಟ್ ನಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿಗಳ ಸಹಿತ 46 ಎಸೆತಗಳಲ್ಲಿ 77 ರನ್ ಗಳಿಸಿದ್ದಾರೆ.
ಬಟ್ಲರ್ ಅವರು ಟಿ-20 ವೃತ್ತಿಬದುಕಿನಲ್ಲಿ 457ಪಂದ್ಯಗಳಲ್ಲಿ 431 ಇನಿಂಗ್ಸ್ ಗಳಲ್ಲಿ 13,046 ರನ್ ಗಳಿಸಿದ್ದಾರೆ. 35.74ರ ಸರಾಸರಿಯಲ್ಲಿ 8 ಶತಕಗಳು ಹಾಗೂ 93 ಅರ್ಧಶತಕಗಳನ್ನು ಗಳಿಸಿದ್ದು, ಗರಿಷ್ಠ ವೈಯಕ್ತಿಕ ಸ್ಕೋರ್ 124.
ಟಿ-20 ಕ್ರಿಕೆಟ್ ನಲ್ಲಿ 13,000 ರನ್ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್(14,562 ರನ್),ಕಿರೊನ್ ಪೋಲಾರ್ಡ್(13,854 ರನ್), ಅಲೆಕ್ಸ್ ಹಾಲೆಸ್(13,814 ರನ್), ಶುಐಬ್ ಮಲಿಕ್(13,571 ರನ್), ವಿರಾಟ್ ಕೊಹ್ಲಿ(13,543 ರನ್)ಹಾಗೂ ಡೇವಿಡ್ ವಾರ್ನರ್(13,395 ರನ್)ಅವರಿದ್ದಾರೆ.
ಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಬಟ್ಲರ್ ಅವರು ಇಂಗ್ಲೆಂಡ್ ಪರ ಗರಿಷ್ಠ ರನ್ ಕಲೆ ಹಾಕಿದ್ದಾರೆ. ಅವರು 147ರ ಸ್ಟ್ರೈಕ್ ರೇಟ್ ನಲ್ಲಿ 1 ಶತಕ ಹಾಗೂ 27 ಅರ್ಧಶತಕಗಳ ಸಹಿತ 35.92ರ ಸರಾಸರಿಯಲ್ಲಿ 137 ಪಂದ್ಯಗಳಲ್ಲಿ 3,700 ರನ್ ಗಳಿಸಿದ್ದಾರೆ. 2022ರಲ್ಲಿ ಇಂಗ್ಲೆಂಡ್ ತಂಡವು ಟಿ-20 ವಿಶ್ವಕಪ್ ಗೆಲ್ಲುವಲ್ಲಿ ತಂಡದ ನಾಯಕತ್ವವಹಿಸಿದ್ದರು.
ಬಟ್ಲರ್ ತನ್ನ ಐಪಿಎಲ್ ವೃತ್ತಿಜೀವನದಲ್ಲಿ ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದು, 121 ಪಂದ್ಯಗಳಲ್ಲಿ 40ರ ಸರಾಸರಿಯಲ್ಲಿ 149ಕ್ಕೂ ಅಧಿಕ ಸ್ಟ್ರೈಕ್ರೇಟ್ ನಲ್ಲಿ 4,120 ರನ್ ಗಳಿಸಿದ್ದರು. ಬಟ್ಲರ್ ಐಪಿಎಲ್ ಟೂರ್ನಿಯಲ್ಲಿ 7 ಶತಕಗಳು ಹಾಗೂ 24 ಅರ್ಧಶತಕಗಳನ್ನು ಗಳಿಸಿದ್ದು, ಮುಂಬೈ ಇಂಡಿಯನ್ಸ್ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.
ವಿಟಾಲಿಟಿ ಬ್ಲಾಸ್ಟ್ ಟೂರ್ನಮೆಂಟ್ ನಲ್ಲಿ ಬಟ್ಲರ್ 113 ಪಂದ್ಯಗಳಲ್ಲಿ 32.54ರ ಸರಾಸರಿಯಲ್ಲಿ 21 ಅರ್ಧಶತಕಗಳ ಸಹಿತ 2,669 ರನ್ ಗಳಿಸಿದ್ದಾರೆ.
ಬಟ್ಲರ್ ತನ್ನ ಟಿ-20 ವೃತ್ತಿಜೀವನದಲ್ಲಿ ಐಪಿಎಲ್, ದಕ್ಷಿಣ ಆಫ್ರಿಕಾ 20, ದಿ ಹಂಡ್ರೆಡ್ ಹಾಗೂ ಬಿಗ್ ಬ್ಯಾಶ್ ಲೀಗ್ಗಳಲ್ಲಿ ಭಾಗವಹಿಸಿದ್ದರು. ಟಿ-20 ಮಾದರಿಯ ಕ್ರಿಕೆಟ್ ನಲ್ಲಿ ಹೆಚ್ಚು ಸಾಧನೆಗೈದ ಬ್ಯಾಟರ್ ಗಳ ಪೈಕಿ ಒಬ್ಬರಾಗಿದ್ದಾರೆ.







