T20 ಕ್ರಿಕೆಟ್: ಭಾರತದ ಪರ ಎರಡನೇ ವೇಗದ ಅರ್ಧಶತಕ ಗಳಿಸಿದ ಅಭಿಷೇಕ್

ಅಭಿಷೇಕ್ ಶರ್ಮಾ | Photo Credit : PTI
ಹೊಸದಿಲ್ಲಿ, ಜ.26: ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ಗುವಾಹಟಿಯಲ್ಲಿ ನಡೆದ ಮೂರನೇ ಟಿ–20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಟಿ–20 ಕ್ರಿಕೆಟ್ನಲ್ಲಿ ಭಾರತದ ಪರ ಎರಡನೇ ವೇಗದ ಅರ್ಧಶತಕ ದಾಖಲಿಸಿದರು.
ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 16 ಎಸೆತಗಳಲ್ಲಿ 50 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಸಹ ಆಟಗಾರ ಹಾರ್ದಿಕ್ ಪಾಂಡ್ಯ ದಾಖಲೆಯನ್ನು ಮುರಿದಿದ್ದರು.
ಭಾರತದ ಪರ ವೇಗದ ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ ತಮ್ಮ ಮೆಂಟರ್ ಯುವರಾಜ್ ಸಿಂಗ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಯುವರಾಜ್ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಆ ವೇಳೆ ಅವರು ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಸಿಡಿಸಿದ್ದರು.
ಒಟ್ಟಾರೆ, ಯುವರಾಜ್ ಅವರ ಪ್ರಯತ್ನವು ಟಿ–20 ಕ್ರಿಕೆಟ್ನ ಎರಡನೇ ವೇಗದ ಅರ್ಧಶತಕವಾಗಿದೆ. 2023ರ ಏಷ್ಯನ್ ಗೇಮ್ಸ್ನಲ್ಲಿ ಮಂಗೋಲಿಯಾ ವಿರುದ್ಧ 9 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ನೇಪಾಳದ ದೀಪೇಂದ್ರ ಸಿಂಗ್ ಅವರು ಯುವರಾಜ್ ದಾಖಲೆಯನ್ನು ಮುರಿದಿದ್ದರು.
ಜ.21ರಂದು ನಾಗಪುರದಲ್ಲಿ ನಡೆದ ಮೊದಲ ಪಂದ್ಯದಲ್ಲೂ ಅಬ್ಬರಿಸಿದ್ದ ಅಭಿಷೇಕ್, ರವಿವಾರ ಗುವಾಹಟಿಯಲ್ಲಿ 20 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಐದು ಸಿಕ್ಸರ್ಗಳೊಂದಿಗೆ ಔಟಾಗದೆ 68 ರನ್ ಗಳಿಸಿ ಭಾರತಕ್ಕೆ ಎಂಟು ವಿಕೆಟ್ ಜಯ ತಂದುಕೊಟ್ಟಿದ್ದರು.







