ಟಿ-20 ಕ್ರಿಕೆಟ್| ಒಮಾನ್ ವಿರುದ್ಧ ಝಿಂಬಾಬ್ವೆಗೆ ಗೆಲುವು

Photo Credit : PTI
ಕೊಲಂಬೊ, ಫೆ.9: ವೇಗದ ಬೌಲರ್ಗಳಾದ ಬ್ಲೆಸ್ಸಿಂಗ್ ಮುಝರಬನಿ(3-16), ರಿಚರ್ಡ್ ಗರಾವಾ(3-17) ಹಾಗೂ ಬ್ರಾಡ್ ಎವನ್ಸ್(3-18)ಆಕರ್ಷಕ ಬೌಲಿಂಗ್ ನೆರವಿನಿಂದ ಝಿಂಬಾಬ್ವೆ ತಂಡವು ಒಮಾನ್ ತಂಡದ ವಿರುದ್ಧ ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಎಂಟು ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತು.
ಸೋಮವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಗೆಲ್ಲಲು 104 ರನ್ ಗುರಿ ಪಡೆದ ಝಿಂಬಾಬ್ವೆ ತಂಡವು 13.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ.
ಆರಂಭಿಕ ಆಟಗಾರ ಬ್ರಿಯಾನ್ ಬೆನ್ನೆಟ್(ಔಟಾಗದೆ 48 ರನ್, 36 ಎಸೆತ, 7 ಬೌಂಡರಿ)ಹಾಗೂ ವಿಕೆಟ್ಕೀಪರ್-ಬ್ಯಾಟರ್ ಬ್ರೆಂಡನ್ ಟೇಲರ್(31 ರನ್, 30 ಎಸೆತ, 3 ಬೌಂಡರಿ)ಸಂಘಟಿತ ಪ್ರದರ್ಶನದ ನೆರವಿನಿಂದ ಝಿಂಬಾಬ್ವೆ ತಂಡವು ಇನ್ನೂ 39 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿರುವ ಒಮಾನ್ ತಂಡವು 19.5 ಓವರ್ಗಳಲ್ಲಿ ಕೇವಲ 103 ರನ್ಗೆ ಆಲೌಟಾಯಿತು. ತ್ರಿವಳಿ ವೇಗಿಗಳಾದ ಮುಝರ್ಬನಿ, ಎವನ್ಸ್ ಹಾಗೂ ರಿಚರ್ಡ್ ಎಎಸ್ಸಿಯ ಬೌನ್ಸಿ ಪಿಚ್ನಲ್ಲಿ ಎದುರಾಳಿ ತಂಡವನ್ನು ಕಾಡಿದರು. ಟಿ-20 ವಿಶ್ವಕಪ್ ಪಂದ್ಯದಲ್ಲಿ ಇದೇ ಮೊದಲ ಬಾರಿ ವೇಗದ ಬೌಲರ್ಗಳು ಈ ಸಾಧನೆ ಮಾಡಿದ್ದಾರೆ. ಪವರ್ಪ್ಲೇನಲ್ಲಿ ಮೂರು ವಿಕೆಟ್ಗಳು ಪತನಗೊಂಡವು.
ಒಮಾನ್ ತಂಡವು 27 ರನ್ಗೆ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ಆಗ ವಿನಾಯಕ ಶುಕ್ಲಾ(28 ರನ್, 21 ಎಸೆತ), ಸುಫಿಯಾನ್ ಮೆಹಮೂದ್(25 ರನ್, 39 ಎಸೆತ)ಆರನೇ ವಿಕೆಟ್ಗೆ 42 ರನ್ ಸೇರಿಸಿದರು. ನದೀಂ ಖಾನ್(20 ರನ್, 18 ಎಸೆತ)ಸಾಧಾರಣ ಪ್ರದರ್ಶನ ನೀಡಿದರು.
ಝಿಂಬಾಬ್ವೆ ತಂಡದ ಪರವಾಗಿ ಬ್ಲೆಸ್ಸಿಂಗ್ ಮುಝರಬನಿ(3-16), ರಿಚರ್ಡ್ ಗರಾವ(3-17)ಹಾಗೂ ಬ್ರಾಡ್ ಎವನ್ಸ್(3-18)ತಲಾ ಮೂರು ವಿಕೆಟ್ಗಳನ್ನು ಕಬಳಿಸಿದರು.






